ಆನಂದ್ ತೇಲ್ತುಂಬ್ಡೆಗೆ ಬೆಂಬಲ: ಜಗತ್ತಿನ 600ಕ್ಕೂ ಹೆಚ್ಚು ವಿದ್ವಾಂಸರಿಂದ ಮೋದಿ ಸರ್ಕಾರಕ್ಕೆ ಪತ್ರ

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಭೀಮಾ ಕೋರೆಗಾಂವ್ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಹೆಸರಾಂತ ದಲಿತ ಚಿಂತಕ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ ಅವರ ಬೆನ್ನಿಗೆ ಬಿದ್ದಿರುವ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳ ವಿದ್ವಾಂಸರು ದನಿ ಎತ್ತಿದ್ದಾರೆ. ತೇಲ್ತುಂಬ್ಡೆ ಅವರ ವಿರುದ್ಧದ ಪ್ರಕರಣಗಳನ್ನು ತಕ್ಷಣವೆ ಕೈ ಬಿಡುವಂತೆ ಯುರೋಪ್ ಮತ್ತು ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳ ವಿದ್ವಾಂಸರು ಕೇಂದ್ರ ಮತ್ತು ಮಹರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ದೇಶದ ಹಲವು ಚಿಂತಕರು ಮತ್ತು ಹೋರಾಟಗಾರರನ್ನು ಮಹಾರಾಷ್ಟ್ರ ಸರ್ಕಾರ ಬಂಧಿಸಿದ್ದು ಆನಂದ್ ತೇಲ್ತುಂಬ್ಡೆ ಅವರನ್ನು ಕೂಡ ಇತ್ತೀಚೆಗೆ ಬಂಧಿಸಿತ್ತು. ಬಳಿಕ ಕೋರ್ಟ್ ಆದೇಶದಂತೆ ಬಿಡುಗಡೆಗೊಳಿಸಿತ್ತು. ಆದರೆ ತದನಂತರವೂ ತೇಲ್ತುಂಬ್ಡೆ ಅವರನ್ನು ಬಂಧಿಸಲು ಮಹಾರಾಷ್ಟ್ರ ಪೊಲೀಸರು ತುದಿಗಾಲಲ್ಲಿ ನಿಂತಿದ್ದಾರೆ.

ಈ ಪ್ರಕರಣದಲ್ಲಿ ಆನಂದ್ ತೇಲ್ತುಂಬ್ಡೆ ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ನಿರಾಧಾರವಾಗಿವೆ ಎಂದು ಈಗಾಗಲೇ ಭಾರತ ಸೇರಿದಂತೆ ಹಲವಾರು ದೇಶಗಳ ಚಿಂತಕರು ಮತ್ತು ಬರಹಗಾರರು ತೇಲ್ತುಂಬ್ಡೆ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಮೇರಿಕದ ಖ್ಯಾತ ಚಿಂತಕ ನೋಮ್ ಚೊಮ್ಸ್‌ಕಿ ಕೂಡ ಇತ್ತೀಚೆಗೆ ಭಾರತ ಸರ್ಕಾರಕ್ಕೆ ಈ ಕುರಿತು ಪತ್ರ ಬ್ರೆದು ತೇಲ್ತುಂಬ್ಡೆ ಅವರ ಬಂಧನವನ್ನು ವಿರೋಧಿಸಿದ್ದರು.

ಇದೀಗ 600ಕ್ಕೂ ಹೆಚ್ಚು ವಿದ್ವಾಂಸರು, ಚಿಂತಕರು ಮತ್ತು ಲೇಖಕರು ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಬಾರದು ಎಂದು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ತೇಲ್ತುಂಬ್ಡೆ ದಲಿತ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಅಪ್ರತಿಮ ದಲಿತ ಚಿಂತಕರಾಗಿದ್ದಾರೆ. ಇವರ ವಿರುದ್ಧ ಭಾರತ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾಡಿರುವ ಆರೋಪಗಳನ್ನು ತಕ್ಷಣವೆ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕಾನೂನುಬಾಹೊರವಾಗಿ ತೇಲ್ತುಂಬ್ಡೆ ಅವರ ಮನೆಯ ಶೋಧ ನಡೆಸಿದ್ದನ್ನೂ ಸಹ ಈ ಪತ್ರದಲ್ಲಿ ಖಂಡಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ