ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ಪೊಲೀಸರ ವಶಕ್ಕೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ರವಿ ಪೂಜಾರಿ ವಿರುದ್ಧ ಹಫ್ತಾ ವಸೂಲಿ, ಬೆದರಿಕೆ ಮುಂತಾದ ಗಂಭೀರ ಪ್ರಕರಣಗಳು ದಾಖಲಾಗಿದ್ದು  ಕೇಂದ್ರ ಸರಕಾರ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು.  ಉದ್ಯಮಿಗಳು, ರಾಜಕಾರಣಿಗಳು ಅವನ ಗುರಿಯಾಗುತ್ತಿದ್ದರು. ವಿದೇಶದಲ್ಲಿ ಇದ್ದುಕೊಂಡು, ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದ್ದ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಇವನ ವಿರುದ್ಧ ದೂರು ದಾಖಲಾಗಿದ್ದವು.

ಸದ್ಯಕ್ಕೆ ರವಿ ಪೂಜಾರಿಯನ್ನು ಡಾಕರ್ ನಲ್ಲಿರುವ ರೆಬ್ಯೂಸ್ ಡಿಟಕ್ಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ರವಿ ಪೂಜಾರಿ ಮೇಲೆ ಕರ್ನಾಟಕದಲ್ಲಿ 20 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ ಈತನ ವಿರುದ್ಧ 3 ಶೂಟ್ ಔಟ್ ಮತ್ತು 3 ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಈ ಭೂಗತ ಪಾತಕಿಯ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿವೆ.

ದೂರವಾಣಿ ಕರೆಗಳನ್ನು ಮಾಡಿ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮತ್ತು ಬಾಲಿವುಡ್ ನಟರನ್ನು ಹೆದರಿಸಿ ತನ್ನ ಸಹಚರರ ಮೂಲಕ ಹಫ್ತಾ ವಸೂಲು ಮಾಡಿಸುತ್ತಿದ್ದ ಕುಖ್ಯಾತಿ ಈತನಿಗಿದೆ. ಆ್ಯಂಟೋನಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಆಫ್ರಿಕಾ ದೇಶಗಳಲ್ಲಿ ತಿರುಗುತ್ತಿದ್ದ ಎನ್ನಲಾಗುತ್ತಿದೆ.

 

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ