ಕೋಟದಲ್ಲಿ ಕರಾಳ ರಾತ್ರಿ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಕೊಲೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರನ್ನು ಕೊಲೆ ಮಾಡಿದ ಘಟನೆ ಕೋಟದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಭರತ್ ಪೂಜಾರಿ ಮತ್ತು ಯತೀಶ್ ಕಾಂಚನ್ ಕೊಲೆಯಾದವರು. ಭರತ್ ಆಟೋಚಾಲಕರಾಗಿದ್ದರೆ ಯತೀಶ್ ಇತ್ತೀಚಿನ ತನಕ ರಾಜಕಾರಣಿ ರಾಕೇಶ್ ಮಲ್ಲಿಯ ಜೊತೆ ಕೆಲಸ ಮಾಡುತ್ತಿದ್ದರು.

ಸಹೋದರರಾದ ರಾಜಶೇಖರ ರೆಡ್ಡಿ ಮತ್ತು ಚಂದ್ರಶೇಖರ ರೆಡ್ಡಿ ಈ ಕೊಲೆಯಲ್ಲಿ ಪ್ರಮುಖ ಆರೋಪಿಗಳು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಲೋಹಿತ್ ಪೂಜಾರಿ ಎಂಬವರು ಇತ್ತೀಚೆಗೆ ಕೋಟ ಸಮೀಪದ ಮಣೂರಿನಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಈ ಮನೆಯ ಪಕ್ಕವೆ ರೆಡ್ಡಿ ಸಹೋದರರ ಮನೆಯೂ ಇದೆ. ಇತ್ತೀಚೆಗೆ ಲೋಹಿತ್ ಪೂಜಾರಿ ಅವರ ಬಾವಿ ಇರುವ ಜಾಗದ ಸಮೀಪದಲ್ಲೆ ರೆಡ್ಡಿ ಸಹೋದರರು ಶೌಚಾಲಯದ ಗುಂಡಿ ತೋಡಲು ಮುಂದಾಗಿದ್ದರು. ಇದಕ್ಕೆ ಲೋಹಿತ್ ಆಕ್ಷೇಪ ವ್ಯಕ್ತಪಡಿಸಿದ್ದು ರೆಡ್ಡಿ ಸಹೋದರರ ಸಿಟ್ಟಿಗೆ ಕಾರಣವಾಗಿತ್ತು. ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಲೋಹಿತ್ ಶನಿವಾರ ರಾತ್ರಿ ಮೆಹಂಡಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದು ಮರಳಿ ಬರುವಾಗ ಕೋಟದಲ್ಲಿ ತನಗಾಗಿ ಕೆಲವು ವ್ಯಕ್ತಿಗಳು ಕಾರೊಂದರಲ್ಲಿ ಹೊಂಚು ಹಾಕಿ ಕುಳಿತಿರುವುದು ತಿಳಿದುಬಂದಿದೆ. ತಕ್ಷಣವೆ ಅವರು ಸ್ನೇಹಿತರಾದ ಭರತ್ ಮತ್ತು ಯತೀಶ್ಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಭರತ್ ಮತ್ತು ಯತೀಶ್ ಬರುತ್ತಿದ್ದಂತೆಯೆ ಅವರ ಮೇಲೆ ಎಗರಿದ ರೆಡ್ಡಿ ಸಹೋದರರು ಇಬ್ಬರನ್ನೂ ತಲವಾರುಗಳಿಂದ ಕೊಚ್ಚಿದ್ದಾರೆ. ಭರತ್ ಪೂಜಾರಿ ಸ್ಥಳದಲ್ಲೆ ಮೃತಪಟ್ಟರೆ ಯತೀಶ್ ಕಾಂಚನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಹರೀಶ್ ಮತ್ತು ರಾಜಶೇಖರ ರೆಡ್ಡಿ ಇಬ್ಬರೂ ರೌಡಿ ಷೀಟರ್ ಆಗಿದ್ದು ಇವರಿಬ್ಬರ ಮೇಲೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಬಾಳಿ ಬದುಕಬೇಕಾದ ಇಬ್ಬರು ಯುವಕರ ಈ ಕಗ್ಗೊಲೆ ಕೋಟ ಪೇಟೆಯನ್ನು ತಲ್ಲಣಗೊಳಿಸಿದೆ. 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ