ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆಗೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ವಿಐಪಿ ಸೌಕರ್ಯ ಒದಗಿಸುತ್ತಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಲ್ಲಿ ತಿಳಿದುಬಂದಿದೆ.

ಶಶಿಕಲಾಗೆ ಒಂದು ಕೊಠಡಿ ನೀಡುವಂತೆ ಕೋರ್ಟ್ ಆದೇಶಿಸಿದ್ದರೂ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಜೈಲಿನಲ್ಲಿ ಅಡುಗೆ ಮಾಡಿಕೊಳ್ಳಲು ವಿನಾಯಿತಿ ಇಲ್ಲ. ಆದರೆ, ಶಶಿಕಲಾ ಅಡುಗೆ ಮಾಡಿಕೊಳ್ಳಲು ಜೈಲಿನ ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಗುಂಪಾಗಿ ಬರುವ ಜನರು ಆಕೆಯ ಕೊಠಡಿಗೆ ನೇರವಾಗಿ ತೆರಳಿ 3 ರಿಂದ ನಾಲ್ಕು ಗಂಟೆಗಳ ಕಾಲ  ಮಾತುಕತಕೆ ನಡೆಸಲು ಅವಕಾಶ ನೀಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಈ ಹಿಂದೆ ಕಾರಾಗೃಹದ ಡಿಐಜಿ ಆಗಿದ್ದ ಡಿ. ರೂಪಾ 2017ರಲ್ಲಿಯೇ ಶಶಿಕಲಾ ಹಾಗೂ ಆಕೆಯ ಸಹಚರರಿಗೆ  ಪ್ರತ್ಯೇಕವಾದ ಅಡುಗೆ ಮನೆ, ಹೆಚ್ಚುವರಿ ಕೊಠಡಿಗಳು ಹಾಗೂ ಸಂದರ್ಶಕರ ಅವಧಿ ವಿಸ್ತರಿಸುವ ಮೂಲಕ ವಿಶೇಷವಾಗಿ ಉಪಚರಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಇದು ಸುಳ್ಳಿನ ಆರೋಪವಾಗಿದೆ ಎಂದು ಅಂದಿನ ಡಿಜಿ ಆಗಿದ್ದ  ಹೆಚ್ ಎಸ್ ಸತ್ಯನಾರಾಯಣ ರಾವ್ ಹೇಳಿಕೆ ನೀಡಿದ್ದರು.

ಈ ಆರೋಪದ ತನಿಖೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಈ ಸಮಿತಿ ವರದಿ ಈಗ ಹೊರ ಬಂದಿದ್ದು, ಶಶಿಕಲಾ ಹಾಗೂ ಆಕೆಯ ಸಹಚರರಿಗೆ  ಜೈಲಿನಲ್ಲಿ ವಿಶೇಷ ಸೌಕರ್ಯ ಒದಗಿಸಿರುವುದು ತಿಳಿದುಬಂದಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ