ಅಡಿಲೇಡ್: ಸಚಿನ್​ ದಾಖಲೆಯೂ ಸೇರಿ 4 ದಾಖಲೆಗಳು ಧೂಳೀಪಟ

ಕರಾವಳಿ ಕರ್ನಾಟಕ ವರದಿ

ಅಡಿಲೇಡ್
: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ರನ್ ಹರಿದರೆ, ಅಲ್ಲೊಂದು ದಾಖಲೆ ಪತನವಾದಂತೆ ಎಂಬ ವಾಕ್ಯ ಮತ್ತೆ ಸಾಬೀತಾಗಿದೆ.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಈ ಮಾತು ಮತ್ತೆ ಸಾಬೀತಾಗಿದ್ದು, ಕೊಹ್ಲಿ ಭರ್ಜರಿ ಶತಕದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ವಲಯದ 4 ಪ್ರಮುಖ ದಾಖಲೆಗಳು ಪತನವಾಗಿದೆ. ಇಂದು ಕೊಹ್ಲಿ ಸಿಡಿಸಿದ ಶತಕ ಅವರ ಏಕದಿನ ವೃತ್ತಿ ಜೀವನದ 39 ಶತಕ ಸಿಡಿಸಿದ್ದು, ಕ್ರಿಕೆಟ್​ ಇತಿಹಾಸದಲ್ಲೇ 39 ಏಕದಿನ ಶತಕ ಬಾರಿಸಿದ ಎರಡು ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಸಚಿನ್​ ತೆಂಡೂಲ್ಕರ್ ಬಳಿಕ 39 ಶತಕ ಸಿಡಿಸಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.

ಆಸೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 112 ಎಸೆತಗಳಲ್ಲಿ 104 ರನ್​ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಕೊಹ್ಲಿಯ ಇನಿಂಗ್ಸ್​ ಮಹತ್ತರ ಪಾತ್ರವಹಿಸಿತ್ತು. ಈ ಒಂದು ಶತಕ ಇದೀಗ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಎರಡು ದಾಖಲೆಗಳನ್ನು ಅಳಿಸಿ ಹಾಕಿದೆ.

ಶತಕ ಸಿಡಿಸಿದ ಮೊದಲ ನಾಯಕ
ಎರಡನೇ ಏಕದಿನದಲ್ಲಿ ಕಾಂಗರೂ ನಾಡಿನಲ್ಲಿ ಶತಕ ಸಿಡಿಸಿದ ಮೊದಲ ನಾಯಕನಾಗಿ ವಿರಾಟ್​ ಕೊಹ್ಲಿ ಮಿಂಚಿದ್ದಾರೆ. 2 ಭರ್ಜರಿ ಸಿಕ್ಸರ್ 5 ಬೌಂಡರಿಗಳ ಮೂಲಕ ಅಬ್ಬರಿಸಿದ ಕೊಹ್ಲಿ ಮೂರಂಕಿ ದಾಟುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಆಸಿಸ್​ ನೆಲದಲ್ಲಿ ಈ ಹಿಂದೆ ಮೊಹಮ್ಮದ್​ ಅಜರುದ್ದೀನ್ 1992 ರಲ್ಲಿ ನಾಯಕರಾಗಿ 93 ರನ್ ಗಳಿಸಿದ್ದರು. ಈ ದಾಖಲೆಯನ್ನು 2000 ದಲ್ಲಿ ಪಾಕಿಸ್ತಾನದ ವಿರುದ್ಧ ಸಿಡಿಲೆಬ್ಬರದ ಬ್ಯಾಟಿಂಗ್ ಮೂಲಕ 93 ರನ್​ಗಳಿಸಿ ಸಚಿನ್​ ಸರಿಗಟ್ಟಿದ್ದರು. ಆದರೆ ಮಂಗಳವಾರ ನಡೆದ ಪಂದ್ಯದಲ್ಲಿ ರನ್​ ಮೆಷಿನ್​ ರನ್​ ಹರಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ನಾಯಕರುಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಅಗ್ರಸ್ಥಾನಕ್ಕೇರಿಸಿದ್ದಾರೆ.

ಕಡಿಮೆ ಇನ್ನಿಂಗ್ಸ್ ಹೆಚ್ಚು ಶತಕ
ಬ್ಯಾಟಿಂಗ್ ಮೂಲಕ ವಿರಾಟ ರೂಪ ಪ್ರದರ್ಶಿಸಿರುವ ವಿರಾಟ್​ ಕೊಹ್ಲಿ ಅತೀ ಕಡಿಮೆ ಇನಿಂಗ್ಸ್ ನಲ್ಲಿ 39 ಶತಕಗಳಿಸಿದ ದಾಖಲೆ ಮಾಡಿದ್ದಾರೆ. 210 ಏಕದಿನ ಪಂದ್ಯಗಳ ಮೂಲಕ ಈ ದಾಖಲೆ ಬರೆದ ಕೊಹ್ಲಿ ಕ್ರಿಕೆಟ್​ ದೇವರನ್ನೇ ಹಿಂದಿಕ್ಕಿದ್ದಾರೆ. 39 ಶತಕ ಸಿಡಿಸಲು ಸಚಿನ್ ತೆಂಡೂಲ್ಕರ್​ ಬರೋಬ್ಬರಿ 350 ಇನಿಂಗ್ಸ್ ಗಳನ್ನು ಆಡಿದ್ದರು.

ಶ್ರೀಲಂಕಾ ಆಟಗಾರನ ದಾಖಲೆ ಪತನ
ಅಂತಾರಾಷ್ಟ್ರೀಯ ಕ್ರಿಕೆಟ್(ಟೆಸ್ಟ್​ ಮತ್ತು ಏಕದಿನ) ​ನಲ್ಲಿ ಅತಿ ಹೆಚ್ಚು ಶತಕಗಳಿಸಿದ ದಾಖಲೆಯಲ್ಲಿ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. 100 ಸೆಂಚುರಿ ಮೂಲಕ ಸಚಿನ್ ಮೊದಲಿಗರಾಗಿದ್ದರೆ, ರಿಕಿ ಪಾಟಿಂಗ್ 71 ಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ. 63 ಶತಕಗಳಿಸಿ ಮೂರನೇ ಸ್ಥಾನ ಅಲಂಕರಿಸಿದ್ದ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ದಾಖಲೆಯನ್ನು ಕೊಹ್ಲಿ ಇಂದು ಅಳಿಸಿ ಹಾಕಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 64ನೇ ಭರ್ಜರಿ ಶತಕ ಬಾರಿಸಿದ ಕೊಹ್ಲಿ 3ನೇ ಸ್ಥಾನಕ್ಕೆ ಜಿಗಿದು ಲಂಕಾದ ಸಂಗಕ್ಕಾರರನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದಾರೆ.

39 ಶತಕ ಬಾರಿಸಿದ ಎರಡನೇ ಆಟಗಾರ
ಕ್ರಿಕೆಟ್​ ಇತಿಹಾಸದಲ್ಲೇ 39 ಏಕದಿನ ಶತಕ ಬಾರಿಸಿದ ಎರಡು ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಸಚಿನ್​ ತೆಂಡೂಲ್ಕರ್ ಬಳಿಕ 39 ಶತಕ ಸಿಡಿಸಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳಿಸಿರುವ ಸಚಿನ್​ (49)ಗಿಂತ ಕೊಹ್ಲಿ 10 ಶತಕಗಳ ಹಿಂದಿದ್ದು, ಈ ಹಿಂದೆ ಸಚಿನ್ ನುಡಿದಂತೆ ಕ್ರಿಕೆಟ್​ ದೇವರ ದಾಖಲೆಗಳನ್ನು ಕೊಹ್ಲಿ ಮುರಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ