ಈ ಭಾನುವಾರ ಹೊತ್ತು ಕಂತುವ ಸಮಯ, ಕೇಳ ಬನ್ನಿ ಕುಂದಾಪುರದಲ್ಲಿ 'ಇನಿದನಿ'ಯ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಯುವ ಮುಂದಾಳು ಕಿಶೋರ ಕುಮಾರ್ ಕುಂದಾಪುರ ಇವರ ಸಾರಥ್ಯದಲ್ಲಿ ಕುಂದಾಪುರದ ಸಮಾನ ಮನಸ್ಕ ಮಂದಿ ಕಟ್ಟಿಕೊಂಡ ಸಂಸ್ಥೆ 'ಕಲಾಕ್ಷೇತ್ರ ಕುಂದಾಪುರ' ಈ ಬಾರಿ ಮತ್ತೊಮ್ಮೆ 'ಇನಿದನಿ' ಕಾರ್ಯಕ್ರಮ ಪ್ರಸ್ತುತಪಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯದ್ದು 9ನೆಯ ವರ್ಷದ ಇನಿದನಿ ಕಾರ್ಯಕ್ರಮ.

ಕುಂದಾಪುರದ ಜ್ಯೂನಿಯರ್ ಕಾಲೇಜಿನ ಬಯಲು ರಂಗಮಂದಿರದಲ್ಲಿ ಇದೇ ರವಿವಾರ ಜನವರಿ 13ರ ಸಂಜೆ 6 ಗಂಟೆಗೆ ಈ ವರ್ಷದ ಇನಿದನಿ' ಕಾರ್ಯಕ್ರಮ ನಡೆಯಲಿದೆ. ಇನಿದನಿ ಕುಂದಾಪುರ ಸುತ್ತಮುತ್ತಲಿನ ಜನರು ಪ್ರತಿ ವರ್ಷವೂ ಅತ್ಯಂತ ಕುತೂಹಲದಿಂದ ಇದಿರುನೋಡುವ ಕಾರ್ಯಕ್ರಮ. ಹಳೆಯ ಕನ್ನಡ ಚಿತ್ರಗೀತೆಗಳನ್ನು ಸುಮಧುರ ಕಂಠಸಿರಿಯ ಕಲಾವಿದರ ಮೂಲಕ ಹಾಡಿಸಿ ಮಂತ್ರಮುಗ್ಧಗೊಳಿಸುವ ಅಪೂರ್ವ ಕಾರ್ಯಕ್ರಮವೇ ಇನಿದನಿ.

ಈ ವರ್ಷದ ಇನಿದನಿ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಕಿಶೋರ ಕುಮಾರ್ ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆ ಎಂದು ಹೇಳಿದರು. ಈ ಬಾರಿ ಖ್ಯಾತ ಗಾಯಕ ಅಜೇಯ್ ವಾರಿಯರ್, ಕನ್ನಡ ಕೋಗಿಲೆ ಖ್ಯಾತಿಯ ಶ್ರುತಿ ಭಿಡೆ, ದಿವ್ಯ ರಾಮಚಂದ್ರ ಮುಂತಾದ ಕಲಾವಿದರು ಭಾಗವಹಿಸಲಿದ್ದು ಹಿಮ್ಮೇಳವನ್ನು ಮಂಗಳೂರಿನ ರಾಜಗೋಪಾಲ್, ಶಿವಮೊಗ್ಗದ ದೀಪಲ್, ಕೇರಳದ ಸಿ.ಜಿ ಮೋಹನ್ ಮತ್ತು ಜಯಪ್ರಕಾಶ್ ಮುಂತಾದವರು ನಿರ್ವಹಿಸಲಿದ್ದಾರೆ.

ಕಳೆದ ವರ್ಷಗಳಲ್ಲಿ ಹಂತಹಂತವಾಗಿ ಇನಿದನಿ ಕಾರ್ಯಕ್ರಮ ಹೆಚ್ಚುಹೆಚ್ಚು ಸಂಗೀತ ಪ್ರೇಮಿಗಳನ್ನು ಆಕರ್ಷಿಸುತ್ತಿದ್ದು ಈ ಕಾರ್ಯಕ್ರಮ ಕುಂದಾಪುರದ ಸುತ್ತಮುತ್ತಲಿನ ಜನರಲ್ಲಿ ಹಳೆಯ ಕನ್ನಡ ಸಿನೆಮಾ ಹಾಡುಗಳ ಕುರಿತು ವಿಶೇಷ ವ್ಯಾಮೋಹ, ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಮನಕ್ಕೆ ನವೋಲ್ಲಾಸ ತರುತ್ತದೆ ಎಂದು ಕಿಶೋರ ಕುಮಾರ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಹಾಲಿ ಪುರಸಭಾ ಸದಸ್ಯರಾದ ಗಿರಿಶ್ ದೇವಾಡಿಗ, ಪ್ರವೀಣ ಕುಮಾರ್, ಕೆ. ಆರ್. ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ 'ಇನಿದನಿ' ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಸಜ್ಜುಗೊಳಿಸಲಾದ ಪ್ರಚಾರ ಟ್ಯಾಬ್ಲೋಗೆ ಚಾಲನೆ ನೀಡಲಾಯಿತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ