ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ: ನಾಲ್ಕು ವರ್ಷಗಳ ಹಿಂದಿನ ಪ್ರಕರಣದಲ್ಲೀಗ ಕೊಲೆ ಶಂಕೆ!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದ ಕುಂದಾಪುರ ಸಮೀಪದ ಕೊರ್ಗಿ ಗ್ರಾಮದ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ ಇದೀಗ ನಿರ್ಣಾಯಕ ಹಂತ ತಲುಪಿದ್ದು ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಆರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಂದಾಪುರ ತಾಲೂಕು  ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಕಂದಾವರದ ಹೆಬ್ಬಾಗಿಲು ಮನೆ ನಿವಾಸಿ ಮಾಲತಿ ಶೆಟ್ಟಿ (65) 2015ರ ಜೂನ್ 24 ರಂದು ನಾಪತ್ತೆಯಾಗಿದ್ದರು. ಸಂಬಂಧಿಕರ ಮನೆಗೆ ಹೋಗುತ್ತಿದ್ದೇನೆ ಎಂದು ಹೊರಟವರು ಅಂದಿನಿಂದಲೇ ನಾಪತ್ತೆಯಾಗಿದ್ದರು.

ತಾಯಿ ನಾಪತ್ತೆಯಾಗಿರುವ ಕುರಿತು ಸುದ್ದಿ ತಿಳಿದ ಮಾಲತಿ ಶೆಟ್ಟಿ ಅವರ ಮಗ ಸತೀಶ್ ಶೆಟ್ಟಿ ಯುಎಸ್ಎಯಿಂದ ಬಂದು ತಾಯಿಗಾಗಿ ಊರಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಮನೆಯ ಸುತ್ತಲ ಕೆರೆ, ಬಾವಿಗಳಲ್ಲಿ, ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಯಾವುದೆ ಪ್ರಯೋಜನವಾಗಿರಲಿಲ್ಲ.

ಕುಂದಾಪುರ ಪೊಲೀಸರು ಈ ನಾಪತ್ತೆ ಪ್ರಕರಣವನ್ನು ತನಿಖೆಗೆ ಎತ್ತಿಕೊಂಡಿದ್ದರು. ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರ ನೇತೃತ್ವದಲ್ಲಿಯೂ ತನಿಖೆ ನಡೆದರೂ ಮಾಲತಿ ಶೆಟ್ಟಿ ಅವರ ಯಾವುದೆ ಸುಳಿವು ಪತ್ತೆಯಾಗಿರಲಿಲ್ಲ.

ತಾಯಿಯ ನಾಪತ್ತೆ ಪ್ರಕರಣದಲ್ಲಿ ಯಾವುದೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ  ಮಾಲತಿ ಶೆಟ್ಟಿ ಮಗ ಸತೀಶ್ ಶೆಟ್ಟಿ ಕರ್ನಾಟಕ ರಾಜ್ಯ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತಾಯಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು.

ಈನಡುವೆ ಹೈಕೋರ್ಟ್ಗೆ ಅನಾಮಧೇಯ ಪತ್ರವೊಂದು ಬಂದಿದ್ದು ಆ ಪಾತ್ರದ ಆಧಾರದ ಮೇಲೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರು ಮಾಲಕನಾದ ಮಾಲಕ ಹರ್ಷ, ಹುಲಿಯ, ಗೋಪಾಲ(ಚೀಂಕ್ರ), ದಿನೇಶ, ಸಂದೀಪ, ಪ್ರದೀಪ(ಸೂರ) ಎಂಬರ ಮೇಲೆ ಆರೋಪ ಹೊರಿಸಲಾಗಿದೆ. ಇವರೆಲ್ಲ ಸೇರಿ ಮಾಲತಿ ಶೆಟ್ಟಿ ಅವರನ್ನು ಅಪಹರಿಸಿ ಕೊಲೆಗೈದು ಚಿನ್ನಾಭರಣ ದೋಚಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. 

ಬಾರಿನಲ್ಲಿ ಬಯಲಾಯ್ತೆ ಕೊಲೆ ರಹಸ್ಯ?
ಮಾಲತಿ ಶೆಟ್ಟಿ ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಮೈಮೇಲೆ 3.5 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಧರಿಸಿದ್ದರು. ಈ ಕಾರಣಕ್ಕಾಗಿಯೂ ಅವರನ್ನು ಯಾರಾದರೂ ಅಪಹರಿಸಿರಬಹುದು ಅಥವಾ ಕೊಲೆ ಮಾಡಿರಬಹುದು ಎಂಬ ಅನುಮಾನವೂ ಆ ದಿನಗಳಲ್ಲಿ ವ್ಯಕ್ತವಾಗಿತ್ತು. ಆದರೆ ಈ ಕುರಿತು ಪೊಲೀಸರ ತನಿಖೆಯಲ್ಲಿ ಯಾವುದೆ ಪ್ರಗತಿ ಆಗಿರಲಿಲ್ಲ.

ಮಾಲತಿ ಶೆಟ್ಟಿ ಅವರ ಮನೆಯ ಸಮೀಪವೇ ವಾಸಗಿರುವ ವ್ಯಕ್ತಿಯೋರ್ವ ತಾನೇ ಮಾಲತಿ ಶೆಟ್ಟಿಯನ್ನು ಕೊಲೆ ಮಾಡಿಸಿ ಚಿನ್ನಾಭರಣ ದೋಚಿರುವುದಾಗಿ ಸ್ನೇಹಿತನಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಆತ ಬಾರ್ ಒಂದರಲ್ಲಿ ಈ ವಿಷಯವನ್ನು ಗೆಳೆಯನಿಗೆ ಹೇಳಿದ್ದ. ಇದನ್ನು ಪಕ್ಕದ ಟೇಭಲ್ನಲ್ಲಿ ಕೂತಿದ್ದ ಮೂವರು ಕೇಳಿಸಿಕೊಂಡಿದ್ದಾರೆ. ಬಾರ್ನಲ್ಲಿ  ಆಡಿದ ಮಾತುಗಳೆ ಮಾಲತಿ ಶೆಟ್ಟಿ ಅವರದು ನಾಪತ್ತೆ ಪ್ರಕರಣವಲ್ಲ ಬದಲಾಗಿ ಕೊಲೆ ಪ್ರಕರಣ ಎಂಬ ಅನುಮಾನಕ್ಕೆ ಎಡೆಮಾಡಿದೆ ಎನ್ನಲಾಗುತ್ತಿದೆ. 

ಹೈಕೋರ್ಟ್ ಆದೇಶದ ಮೇರೆ ಹೆಚ್ಚಿನ ತನಿಖೆಯನ್ನು ಕುಂದಾಪುರ ಪೊಲೀಸರು ಕೈಗೊಂಡಿದ್ದು ಸದ್ಯದಲ್ಲೆ ಮಾಲತಿ ಶೆಟ್ಟಿ ಅವರ ನಾಪತ್ತೆ ಪ್ರಕರಣದ ತನಿಖೆ ಒಂದು ತಾರ್ಕಿಕ ಅಂತ್ಯಕ್ಕೆ ತಲುಪುವ ನಿರೀಕ್ಷೆ ಇದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ