ಅಕ್ರಮ ಸಂಬಂಧಕ್ಕೆ ಮಕ್ಕಳನ್ನು ಬಲಿಪಡೆದ ತಂದೆ: ಹೆಬ್ಬಾರನ ವಿರುದ್ಧ ಆರೋಪ ಸಾಬೀತು

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ತನಗಿದ್ದ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಕ್ಕಳಿಬ್ಬರಿಗೆ ವಿಷ ಉಣಿಸಿ ಸಾಯಿಸಿ ಹೆಂಡತಿಗೂ ವಿಷ ಉಣಿಸಿ ಆಕೆಯ ಕೊಲೆಗೂ ಯತ್ನಿಸಿದ್ದ ಆರೋಪ ಹೊಂದಿರುವ ಬೈಂದೂರಿನ ಗೋಳಿಕಕ್ಕಾರು ಶಂಕರನಾರಾಯಣ (41) ಹೆಬ್ಬಾರನ ವಿರುದ್ಧ ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೆ ಪ್ರಕಟವಾಗಬೇಕಿದೆ.

2016ರ ಅಕ್ಟೋಬರ್ ತಿಂಗಳಲ್ಲಿ ಬೈಂದೂರಿನ ಗಂಗನಾಡು ಎಂಬಲ್ಲಿ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಸುದ್ದಿಯಾಗಿತ್ತು. ಈ ಘಟನೆಯಲ್ಲಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ತಾಯಿ ಗಂಭೀರ ಸ್ಥಿತಿಯಲ್ಲಿದ್ದರು. ಆದರೆ ಇದೊಂದು ವ್ಯವಸ್ಥಿತ ಕೊಲೆ ಎಂದು ಬಳಿಕ ಬೆಳಕಿಗೆ ಬಂದಿತ್ತು.

ಬೈಂದೂರಿನ ಗೋಳಿಕಕ್ಕಾರು ಶಂಕರನಾರಾಯಣಹೆಬ್ಬಾರನಿಗಿದ್ದ ಅಕ್ರಮ ಸಂಬಂಧ ಈ ಕೊಲೆಗೆ ಕಾರಣವಾಗಿತ್ತು. ಈತನ ಪತ್ನಿ ಮಹಾಲಕ್ಷ್ಮಿ (36) ಮತ್ತು ಮಕ್ಕಳಾದ ಅಶ್ವಿನ್ ಕುಮಾರ್ ಹೆಬ್ಬಾರ್ (16) ಮತ್ತು ಐಶ್ವರ್ಯಲಕ್ಷ್ಮೀಗೆ (14) ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದ. ಆದರೆ ಮಕ್ಕಳಿಬ್ಬರು ಮಾತ್ರ ಸಾವನ್ನಪ್ಪಿದ್ದು ತಂದೆ ತಾಯಿಯ ಒದ್ದಾಟ ಗಮನಿಸಿದ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದರು. ಆರಂಭದಲ್ಲಿ ಇದೊಂದು ಜಾಗದ ತಕರಾರು ಅಥವಾ ಸಾಲ ಬಾಧೆಯ ಕಾರಣಕ್ಕೆ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿತ್ತು.

ಶಂಕರನಾರಾಯಣ ಹೆಬ್ಬಾರ ಅಡುಗೆ ವೃತ್ತಿಯವನಾಗಿದ್ದು 18 ವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ ಮನೆಗೆಲಸಕ್ಕೆ ಬರುತ್ತಿದ್ದ ಯುವತಿಯೋರ್ವಳ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ಈ ಕುರಿತು ಮನೆಯಲ್ಲಿ ಆಗಾಗ ಗಂಡ ಹೆಂಡಿರ ನಡುವೆ ಮಾತಿನ ಜಟಾಪಟಿ ಉಂಟಾಗಿತ್ತು. ಹೆಬ್ಬಾರನಿಗೆ ಯುವತಿಯ ಸಂಪರ್ಕ ಇದ್ದಿದ್ದು ಆತ ಬರೆದ ಡೆತ್ ನೋಟ್‌ನಲ್ಲಿಯೂ ಸ್ಪಷ್ಟವಾಗಿತ್ತು.

ಆ ಯುವತಿಗೆ ಮದುವೆಯಾದ ಕಾರಣ ತಾನು ತೀರಾ ಮನನೊಂದಿದ್ದೇನೆ,  ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೇನೆ ಎಂದು ವಿಷಯವನ್ನು ಮನೆಯಲ್ಲಿ ಹೇಳಿದಾಗ ನೀವೊಬ್ಬರೆ ಬೇಡ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಎಲ್ಲರೂ ಕೀಟನಾಶಕ ಸೇವಿಸಿದ್ದೇವೆ’ ಎಂದು ಹೆಬ್ಬಾರ ತನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದ.

ಆದರೆ ಸ್ಥಳೀಯರ ಪ್ರಕಾರ ಶಂಕರನಾರಾಯಣ ಹೆಬ್ಬಾರ ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವತಿಯನ್ನು ವಿವಾಹವಾಗಿ ಮನೆಗೆ ಕರೆತಂದಿದ್ದು ಈ ವಿಷಯದಲ್ಲಿ ಪತ್ನಿ ಮಕ್ಕಳ ಜೊತೆ ಜಗಳವಾಗಿ ಬಳಿಕ ಮಕ್ಕಳು ಮತ್ತು ಪತ್ನಿಗೆ ವಿಷ ಉಣಿಸಿ ಕೊಲೆಗೆ ಯತ್ನಿಸಿದ್ದಾನೆ. ಇದೊಂದು ಕೊಲೆ ಪ್ರಕರಣವಾಗಿದೆ ಎಂದು ಪೊಲೀಸರು ಸಹ ದೃಢಪಡಿಸಿದ್ದರು.

ಕೊಲೆ ಆರೋಪಿ ಹೆಬ್ಬಾರ 16 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ. ಡೆತ್ ನೋಟ್ ಝೆರಾಕ್ಸ್ ಪ್ರತಿಯನ್ನೂ ಮಾಡಿಸಿಟ್ಟಿದ್ದ ಹೆಬ್ಬಾರ, ಅದನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಿದ್ದ.

ಇದೀಗ ಹೆಬ್ಬಾರನ ವಿರುದ್ಧ ಆರೋಪ ಸಾಬೀತಾಗಿದೆ. ಅಂದಿನ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಶ್ಯೂಕೂಟರ್ ಪ್ರಕಾಶ್‍ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.  ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾದೀಶ ಪ್ರಕಾಶ್ ಖಂಡೇರಿ ಆರೋಪಿ ಎಂದು ಗುರುವಾರ ತೀರ್ಪು ನೀಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ