ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ನಿಧನ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ (98) ಡಿ.25 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಕಳೆದ 20 ದಿನಗಳಿಂದ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸಾಂಪ್ರದಾಯಿಕ ಹೆರಿಗೆ ಮಾಡಿಸುತ್ತಿದ್ದ ನರಸಮ್ಮ ಸೂಲಗಿತ್ತಿ ನರಸಮ್ಮ ಎಂದೇ ಖ್ಯಾತರಾಗಿದ್ದರು.  ಸಾವಿರಾರು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.  ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನರಸಮ್ಮ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಹೇಳಿತ್ತು.

ನರಸಮ್ಮ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಉಸಿರಾಟದ ತೊಂದರೆಯಿಂದ ಸೂಲಗಿತ್ತಿ ನರಸಮ್ಮರವರು ನಿಧನರಾದ ಸುದ್ದಿ ನೋವು ತರಿಸಿದೆ. "ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಹಳ್ಳಿಗಳಲ್ಲಿ 15000 ಹೆರಿಗೆ ಮಾಡಿಸಿದ ಇವರ ಸೇವೆಗೆ ಪದ್ಮಶ್ರೀ ದೊರಕಿತ್ತು. ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ.

ಸೂಲಗಿತ್ತಿ ನರಸಮ್ಮ ಅವರ ಅಗಲಿಕೆ ಸಮಾಜಕ್ಕೆ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ,ದೇವರು ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.' ಎಂದು ಕನರ್ನಾಟಕ ಮುಖ್ಯಮಂತ್ರಿಗಳು ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರ ಗ್ರಾಮದ ನರಸಮ್ಮ ಈವರೆಗೂ 15000 ಹೆರಿಗೆ ಮಾಡಿಸಿದ್ದು, 12 ಮಕ್ಕಳು 36 ಮೊಮ್ಮಕ್ಕಳನ್ನು ಅಗಲಿದ್ದಾರೆ.


2013 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದಿಂದ ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರ ಪ್ರಶಸ್ತಿ, ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ನರಸಮ್ಮ ಭಾಜನರಾಗಿದ್ದಾರೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ