'ಮುಲಾಜಿಲ್ಲದೆ ಶೂಟ್​ ಮಾಡಿ' ಎಂದಿದ್ದು ಆದೇಶವಲ್ಲ. ಭಾವೋದ್ವೇಗದಲ್ಲಿ ಹೇಳಿದ್ದು: ಸಿಎಂ ಸ್ಪಷ್ಟನೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೆ ಶೂಟ್​ ಮಾಡಿ ಎಂದು ಭಾವೋದ್ವೇಗದಲ್ಲಿ ಹೇಳಿದ್ದೇನೆ. ಅದು ಆದೇಶವಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಮುಖಂಡನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಮಾತನಾಡುತ್ತ ಭಾವೋದ್ವೇಗಕ್ಕೆ ಒಳಗಾದ ಸಿಎಂ, “ಹಂತಕರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸ್​ ಅಧಿಕಾರಿಗಳಾದ ನಿಮ್ಮ ಕರ್ತವ್ಯ. ಅವರನ್ನು ಯಾವುದೇ ಮುಲಾಜಿಲ್ಲದೆ ಶೂಟ್​ ಮಾಡಿ” ಎಂದು ತಾಕೀತು ಮಾಡಿದರು.

ಕುಮಾರಸ್ವಾಮಿ ಅವರ ಈ ಹೇಳಿಕೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಬೇಜಾವ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದಿದೆ.

ಪ್ರಕಾಶ್​ ಅವರು ಉತ್ತಮ ಕಾರ್ಯಕರ್ತರಾಗಿದ್ದರು. ಇಂಥ ಒಳ್ಳೆಯ ವ್ಯಕ್ತಿಯ  ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ನನಗೆ ಆಘಾತ ಉಂಟುಮಾಡಿದೆ. ಈ ಮೊದಲು ಕೂಡ 3 ಕೊಲೆಗಳು ನಡೆದಿವೆ. ನಡು ರಸ್ತೆಯಲ್ಲಿ, ಹಾಡ ಹಗಲೇ ಈ ರೀತಿ ಕೊಲೆಗಳು ನಡೆಯುತ್ತಿವೆ. ಇಲ್ಲಿರುವ ಪೊಲೀಸ್​ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಿದ್ದಾರೋ ನನಗಂತೂ ತಿಳಿಯುತ್ತಿಲ್ಲ. ಈ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಸಿಎಂ ತಿಳಿಸಿದ್ದಾರೆ.

ನಿನ್ನೆ ಮದ್ದೂರಿನ ಟಿಬಿ ಸರ್ಕಲ್​ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಪ್ರಕಾಶ್​ ಅವರನ್ನು ಕೊಚ್ಚಿ ಕೊಲೆ ಗೈದಿದ್ದರು. ಹಳೆ ವೈಷಮ್ಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ