ವಿಧಾನಪರಿಷತ್ತಿನ ನೂತನ ಸಭಾಪತಿಯಾಗಿ ಕುಂದಾಪುರದ ಪ್ರತಾಪಚಂದ್ರ ಶೆಟ್ಟಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ವಿಧಾನಪರಿಷತ್ತಿನ ನೂತನ ಸಭಾಪತಿಗಳಾಗಿ ವಿ.ಪರಿಷತ್ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಜನಾನುರಾಗಿ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 

1983 ರಿಂದ 1999ರ ವರೆಗೆ ಸತತವಾಗಿ 4ಬಾರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ ಅವರು 2003ರಿಂದ ಇಂದಿನ ತನಕವೂ ವಿಧಾನಪರಿಷತ್ ಸದಸ್ಯರಾಗಿ ಜನಸೇವೆಯಲ್ಲಿ ಸಕ್ರಿಯರು. ಭ್ರಷ್ಟ ಅಧಿಕಾರಿ ವರ್ಗಕ್ಕೆ ಖಡಕ್ ಜನಪ್ರತಿನಿದಿಯಾಗಿ ಜನಪರ ಕಾಳಜಿಯ ಯೋಜನೆಗಳನ್ನು ಕಡುಬಡವರಿಗೆ ತಲುಪಿಸಿವಲ್ಲಿ ಪ್ರಥಮ ಪ್ರಾಶಸ್ತ್ಯವನ್ನು ನೀಡುವ ನಾಯಕ ಎಂದೇ ಇವರು ಜನಜನಿತರು.

ಆ ಕಾಲಕ್ಕೆ ಹುಯ್ಯಾರಿನ ಹುಲಿ ಎಂದೇ ತಾಲೂಕಿನಾಧ್ಯಂತ ಖ್ಯಾತರಾಗಿರುವ ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಮತ್ತು ಕೊಳ್ಕೆಬೈಲು ಗುಲಾಬಿ ಶೆಡ್ತಿಯವರ ಸುಪುತ್ರನಾಗಿ 1949 ಸೆಪ್ಟೆಂಬರ್‌ 4ರಂದು  ಜನಿಸಿದ ಪ್ರತಾಪ್ ಶೆಟ್ಟರು ಬಿ.ಎ ಪದವಿದರರು. ಪದವಿ ಪಡೆದ ನಂತರ ವಿಜಯಾ ಬ್ಯಾಂಕ್ ನ ಉದ್ಯೋಗಿ ಯಾಗಿ ಪುಣೆ ಹಾಗೂ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ ಆ ನಂತರ ತಂದೆಯವರ ಮರಣದ ತರುವಾಯ ಬ್ಯಾಂಕ್ ಉದ್ಯೋಗ ತೊರೆದು ಊರಿಗೆ ವಾಪಾಸಾಗಿ ಆ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಾಗಿ ತನ್ನ ರಾಜಕೀಯ ಜೀವನವನ್ನು ಜನಸೇವೆಯ ಮೂಲಕ ಆರಂಬಿಸಿದ್ದರು.

ಆ ನಂತರ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿಯ ಉಪಾಧ್ಯಕ್ಷರಾಗಿ,ಎಐಸಿಸಿಯ ಸದಸ್ಯರಾಗಿ  ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ ದೀರ್ಘಾವಧಿಯ ಕಾಲ ಜನತೆಯ ಹಾಗೂ ಪಕ್ಷದ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಆಡಳಿತದ ಈ ಅವಧಿಯಲ್ಲಿ ಅಜಾತಶತ್ರು ಬಿರುದಾಂಕಿತ ಪ್ರತಾಪ್ ಚಂದ್ರ ಶೆಟ್ಟರಿಗೆ ವಿಧಾನಪರಿಷತ್ ಸಭಾಪತಿಯಂತಹ ಪ್ರತಿಷ್ಠಿತವಾದ ಸ್ಥಾನಮಾನ ಯಾವುದೇ ಸ್ಪರ್ದೆ ಇಲ್ಲದೆ ಅವಿರೋಧವಾಗಿ ದೊರಕಿರುವುದು ಅವರ ಹಿರಿತನಕ್ಕೆ ಮತ್ತು ಅನುಭವಕ್ಕೆ ಪಕ್ಷಾತೀತವಾಗಿ ದೊರಕಿದ ಬಹುದೊಡ್ಡ ಗೌರವವಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ