ಮುಖ್ಯಮಂತ್ರಿ ಇರುವುದು ಕೇವಲ ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಹೊರಟ್ಟಿ ಸಿಟ್ಟು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ವಿಧಾನ ಪರಿಷತ್ ಸಭಾಪತಿ ಸ್ಥಾನ ಕೈತಪ್ಪಿರುವುದರ ವಿರುದ್ಧ ಅಸಮಾಧಾನಗೊಂಡಿರುವ ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪರಿಷತ್‌ನ ಹಂಗಾಮಿ ಸಭಾಪತಿಯಾಗಿ ಆಯ್ಕೆಯಾಗಿದ್ದ ಹೊರಟ್ಟಿ ಅವರನ್ನೇ ಮುಂದುವರಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಸಚಿವ ಸ್ಥಾನ ಸಿಗುವುದಿಲ್ಲ ಎಂದು ಖಚಿತವಾದ ಬಳಿಕ ಹೊರಟ್ಟಿ, ಸಭಾಪತಿ ಸ್ಥಾನದಲ್ಲೇ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದರು.  ಆದರೆ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ತನ್ನ ಕಡೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇತ್ತ ಸಚಿವ ಸ್ಥಾನವೂ ಇಲ್ಲದೆ, ಅತ್ತ ಪರಿಷತ್ ಸಭಾಪತಿ ಹುದ್ದೆಯೂ ಇಲ್ಲದೆ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರ ಅತೃಪ್ತಿಗೆ ಕಾರಣವಾಗಿದೆ. ಹೀಗಾಗಿ ಬುಧವಾರ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಇರುವುದು ಕೇವಲ ಹೆಬ್ಬೆಟ್ಟು ಒತ್ತುವುದಕ್ಕಲ್ಲ. ಕಾಂಗ್ರೆಸ್‌ನವರು ಹೇಳಿದ್ದಕ್ಕೆಲ್ಲಾ ಕುಮಾರಸ್ವಾಮಿ ಅವರು ಹೆಬ್ಬೆಟ್ಟು ಒತ್ತುತ್ತಾ ಹೋದರೆ ನಮ್ಮ ಪಕ್ಷದ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಮುಖ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್ ಹೇಳಿದಂತೆಯೇ ನಡೆಯುತ್ತಿರುವುದು ಇದೇ ರೀತಿ ಮುಂದುವರಿದರೆ ಹೆಬ್ಬೆಟ್ಟು ಒತ್ತುವುದಕ್ಕಷ್ಟೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೋಪದಿಂದ ನುಡಿದಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ