ಪ್ರಸಿದ್ಧ ರಂಗಕರ್ಮಿ, ಶ್ರೇಷ್ಠ ಶಿಕ್ಷಕ ಕೂರಾಡಿ ಸೀತಾರಾಮ ಶೆಟ್ಟಿ ಅಸ್ತಂಗತ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಹೆಸರಾಂತ ರಂಗಕರ್ಮಿ, ನಿವೃತ್ತ ಶಿಕ್ಷಕ ಕೂರಾಡಿ ಸೀತಾರಾಮ ಶೆಟ್ಟಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲಿದ ಅವರು ಭಾನುವಾರ ಸಂಜೆ ವಿಧಿವಶರಾಗಿದ್ದಾರೆ.

ನಾಟಕ ರಂಗದಲ್ಲಿ 'ಕೂರಾಡಿ' ಎಂದೇ ಜನಪ್ರಿಯರಾಗಿದ್ದ ಕೂರಾಡಿ ಸೀತಾರಾಮ ಶೆಟ್ಟಿ ನಟನೆ, ನಿರ್ದೇಶನ ಸೇರಿದಂತೆ ನಾಟಕದ ಎಲ್ಲ ಆಯಾಮಗಳಲ್ಲೂ ಹೆಸರುವಾಸಿಯಾಗಿದ್ದರು. ಮಕ್ಕಳ ನಾಟಕಗಳಲ್ಲಿ ಅಪಾರ ಆಸಕ್ತರಾಗಿದ್ದ ಕೂರಾಡಿ ಹಲವಾರು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿ ನಿರ್ದೇಶಿಸಿ ಪ್ರಶಸ್ತಿಯನ್ನೂ ಗಳಿಸಿದ್ದರು.

ಬೈಂದೂರಿನ ಲಾವಣ್ಯ, ಕುಂದಾಪುರದ ರಂಗ ಅಧ್ಯಯನ ಕೇಂದ್ರ ಸೇರಿದಂತೆ ಹಲವು ರಂಗತಂಡಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೂರಾಡಿ ಆ ತಂಡಗಳಿಗಾಗಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದರು. ವಸಂತ ಬನ್ನಾಡಿ, ಸುರೇಶ ಆನಗಳ್ಳಿ ಮುಂತಾದ ಹೆಸರಾಂತ ನಿರ್ದೇಶಕರ ನಾಟಕಗಳಲ್ಲಿ ನಟಿಸಿದ್ದರು.

ಕೂರಾಡಿಯ ಬಿ.ಎಂ ಎಂ ಪ್ರೌಢಶಾಲೆಯನ್ನು ಮುನ್ನಡೆಸಿ ಅಲ್ಲಿಯೇ ಮುಖ್ಯೋಪಾಧ್ಯಾಯರಾಗಿದ್ದ ಕೂರಾಡಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದರು. ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು. ತಮ್ಮ ಶಾಲಾ ವಿದ್ಯಾರ್ಥಿಗಳ ಮೂಲಕ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದರು.

ಮಕ್ಕಳ ನಾಟಕ ಸೇರಿದಂತೆ ಅನೇಕ ನಾಟಕಗಳ ನಿರ್ದೇಶನಕ್ಕಾಗಿ ಕೂರಾಡಿ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ಕೂರಾಡಿ ಸೀತಾರಾಮ ಶೆಟ್ಟಿ ಪತ್ನಿ, ಮೂವರು ಪುತ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೂರಾಡಿ ಅವರ ನಿಧನದಿಂದ ಕರಾವಳಿಯ ನಾಟಕ ರಂಗದ ಒಂದು ಕೊಂಡಿ ಕಳಚಿದಂತಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ