ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ 50 ಸಾವಿರ ರು. ವರೆಗಿನ ಸಾಲ ಮನ್ನಾ: ಕುಮಾರಸ್ವಾಮಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ 50 ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯ ಉದ್ದೇಶಿಸಿ ಮಾತನಾಡಿದ ಸಿಎಂ, ಸರ್ಕಾರಕ್ಕೆ ಆರ್ಥಿಕ ಕೊರತೆ ಇಲ್ಲ. ಸಾಲ ಮನ್ನಾಕ್ಕಾಗಿ 6,500 ಕೋಟಿ ರು. ಮೀಸಲಿಟ್ಟಿದ್ದೇವೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿನ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲಮನ್ನಾ ಆಗಲಿದೆ ಎಂದರು.

ಡಿಸೆಂಬರ್ 8 ರಿಂದ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಹಕಾರಿ ಬ್ಯಾಂಕ್‌ಗಳಿಗೆ ನ. 30 ರವರೆಗಿನ 1,300 ಕೋಟಿ ರು. ಹಣ ಬಿಡುಗಡೆ ಆಗಿದೆ. ಡಿಸೆಂಬರ್‌ನಲ್ಲಿ 1,200 ಕೋಟಿ ರು. ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಸರ್ಕಾರಕ್ಕೆ 2 ಲಕ್ಷದ 20 ಸಾವಿರ ರೈತರು ಮಾಹಿತಿ ನೀಡಿದ್ದಾರೆ. ನಾವು ರೈತರಿಗೆ ಕಮಿಟ್ ಮಾಡಿಕೊಂಡಿದ್ದೇವೆ. ಕೇಂದ್ರ ಕೊಡಲಿ, ಬಿಡಲಿ ನಾವು ಸಾಲಮನ್ನಾ ಮಾಡುತ್ತೇವೆ ಎಂದು  ಸಿಎಂ ತಿಳಿಸಿದರು.

ಮೊದಲ ಹಂತವಾಗಿ ರಾಷ್ಟ್ರೀಕೃತ ರಾಷ್ಟ್ರೀಯ ಬ್ಯಾಂಕುಗಳಲ್ಲಿ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲಮನ್ನಾಗೆ ಈಗಾಗಲೇ ಅಧಿಕಾರಿಗಳಿಗೂ ಆದೇಶಿಸಿದ್ದೇನೆ. ಮೊದಲ ಹಂತದಲ್ಲಿ ಜನವರಿಯಲ್ಲಿ 50 ಸಾವಿರ ಸಾಲಮನ್ನಾ ಆಗಲಿದೆ ಎಂದರು.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ರಾಷ್ಟ್ರೀಕೃತ ಬ್ಯಾಂಕ್ ಗಳು ಕೇಂದ್ರದ ಅಡಿಯಲ್ಲಿ ಬರುತ್ತವೆ. ಬಿಜೆಪಿಯವರು ಸಾಲಮನ್ನಾಕ್ಕೆ ಇನ್ನು ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪನವರು ಕೇಂದ್ರದ ಬಳಿ ಕೇಳಬೇಕು. ಮೊದಲು ಅಲ್ಲಿ ಕೇಳುವುದನ್ನು ಬಿಟ್ಟು ನನ್ನ ಬಳಿ ಕೇಳುತ್ತಿದ್ದಾರೆ. ಅಧಿವೇಶನದಲ್ಲಿ ಈ ಎಲ್ಲ ವಿಚಾರ ಚರ್ಚಿಸಲು ಸಿದ್ಧವಾಗಿದ್ದೇನೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸಾಲ ಮನ್ನಾದಲ್ಲಿ ಶೇ. 50ರಷ್ಟನ್ನು ಕೇಂದ್ರ ನೀಡಬೇಕೆಂದು ಕೇಳಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಎರಡು ಭಾರಿ ಭೇಟಿ ನೀಡಿದಾಗಲೂ ಶೇ. 50ರಷ್ಟು ಸಾಲದ ಹೊರೆ ಹೊರುವಂತೆ ಮನವಿ ಮಾಡಿದ್ದೇವೆ. ಹೀಗಿದ್ದರೂ ನಾವು ಕೇಂದ್ರಕ್ಕೆ ಅಂಟಿಕೊಂಡು ನಿಂತಿಲ್ಲ. ಬ್ಯಾಂಕುಗಳ ಜತೆ ನಿರಂತರ ಸಭೆ ನಡೆಯುತ್ತಿದೆ. ಸರ್ಕಾರ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸುತ್ತಲೇ ಇದ್ದಾರೆ ಎಂದು ಸಿಎಂ ಹೇಳಿದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ