ಮನೆಗೆ ಮರಳುತ್ತಿದ್ದ ಕಾರವಾರದ ಬಿಎಸ್‌ಎಫ್ ಯೋಧ ರೈಲಿನಲ್ಲಿ ಸಾವು: ಮಡುಗಟ್ಟಿದ ಶೋಕ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಸೇನೆಯಲ್ಲಿರುವ ದುಮಿಂಗ್ ಸಿದ್ಧಿ ರಜೆಯ ಮೆಲೆ ಬುಧವಾರ ಕಾರವಾರದ ತಮ್ಮ ಮನೆಗೆ ಬರುತ್ತಿದ್ದಾನೆ ಎಂದು ಕಾದಿದ್ದ ಕುಟುಂಬಸ್ಥರಿಗೆ ಸೋಮವಾರ ಆತನ ಮರಣದ ವಾರ್ತೆ ತಲುಪಿದ್ದು ಕುಟುಂಬವು ದುಃಖದಲ್ಲಿ ಮುಳುಗಿದೆ.

ಪಂಜಾಬ್‌ನ ಪಾಕಿಸ್ತಾನ ಗಡಿಭಾಗವಾದ ಪಠಾಣ್‌ಕೋಟ್‌ನಲ್ಲಿ ಬಿಎಸ್‌ಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ತಾಲೂಕಿನ ಮಖೇರಿಯ ನಿವಾಸಿ ದುಮಿಂಗ್ ಮೋತೇಸ್ ಸಿದ್ಧಿ(39) ಶನಿವಾರದಂದು ತನ್ನ ಪತ್ನಿಗೆ ಕರೆ ಮಾಡಿ ತಾನು ರಜೆಯ ಮೇಲೆ ಊರಿಗೆ ಬರುತ್ತಿದ್ದು ಸೋಮವಾರ ರೈಲನ್ನೇರಿ ಬುಧವಾರ ತಲುಪುತ್ತೇನೆ ಎಂದಿದ್ದರು.

ಎರಡು ದಿನವಾದರೂ ಕರೆ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಮಗ ತಂದೆಯ ಮೊಬೈಲ್‌ಗೆ ಸೋಮವಾರ ಕರೆಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ಅಧಿಕಾರಿಗಳು ಯೋಧನು ಶನಿವಾರವೇ ರೈಲನ್ನೇರಿದ್ದ ಎಂದು ಹೇಳಿದ್ದು ರೈಲಿನಲ್ಲಿ ಸಂಚರಿಸುವಾಗ ಮೃತಪಟ್ಟಿದ್ದಾನೆ ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸೋಮವಾರ ರೈಲನ್ನೇರುತ್ತೇನೆ ಎಂದವನು ಶನಿವಾರವೇ ಯಾಕೆ ಹೊರಟ? ಎಂಬುದು ಕುಟುಂಬದವರ ಗೊಂದಲಕ್ಕೆ ಕಾರಣವಾಗಿದೆ.

ದುಮಿಂಗ್ ಸಿದ್ಧಿ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕರ್ತವ್ಯದಲ್ಲಿದ್ದು ಇನ್ನು ಒಂದು ವರ್ಷದಲ್ಲಿ ನಿವೃತ್ತಿಯಾಗುವುದಿತ್ತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಯೋಧ ದುಮಿಂಗ್ ಸಿದ್ಧಿ ಮೃತ ಪಟ್ಟಿರುವುದು ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಯೋಧನ ಕುಟುಂಬದವರೊಂದಿಗೆ ಸೈನಿಕ್ ವೆಲ್ಫೇರ್ ಬೋರ್ಡ್ ಉಪನಿರ್ದೇಶಕಿ ಇಂದುಪ್ರಭಾ ಅವರು ಸಂಪರ್ಕದಲ್ಲಿದ್ದು ಪಾರ್ಥೀವ ಶರೀರವನ್ನು ಮಥುರಾದ ಮಿಲಿಟರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಪಾರ್ಥೀವ ಶರೀರದ ಆಗಮನದ ಕುರಿತು ಅಲ್ಲಿಂದ ಮಾಹಿತಿ ಬಂದ ತಕ್ಷಣ ಕುಟುಂಬದವರಿಗೆ ತಿಳಿಸಲಾಗುವುದು ಎಂದಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ