ಒಬ್ಬನೆ ವ್ಯಕ್ತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ 21 ಕೇಸ್. ಭಾರತದಲ್ಲೆ ದಾಖಲೆ!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತನಾಗಿರುವ ಪತ್ರಕರ್ತ ಚಂದ್ರ ಕೆ ಹೆಮ್ಮಾಡಿಗೆ ಡಿಸೆಂಬರ್ 17ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ಕಸ್ಟಡಿ ಮುಗಿದ ಬಳಿಕ ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಆತನನ್ನು ಒಪ್ಪಿಸಲಾಗಿದೆ.

ಚಂದ್ರ ಹೆಮ್ಮಾಡಿಯ ವಿರುದ್ಧ ಒಟ್ಟು 21 ಪ್ರಕರಣಗಳು ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದು ಇದು ಭಾರತದಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ಬಂದ ಬಳಿಕ ಒಬ್ಬನೆ ವ್ಯಕ್ತಿಯ ವಿರುದ್ಧ ದಾಖಲಾದ ಅತ್ಯಧಿಕ ಪ್ರಕರಣಗಳು ಎನ್ನಲಾಗುತ್ತಿದೆ.

ಬೈಂದೂರು ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾದ ಬಳಿಕ ಸರಣಿ ಪ್ರಕರಣಗಳು ಬೈಂದೂರು, ಗಂಗೊಳ್ಳಿ ಮತ್ತು ಕುಂದಾಪುರ ಗ್ರಾಮಾಂತರ ಠಾಣೆಗಳಲ್ಲಿ ದಾಖಲಾಗಿವೆ. ಚಂದ್ರ ಹೆಮ್ಮಾಡಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕರ ಪೋಷಕರು ಸ್ವಯಂಪ್ರೇರಿತರಾಗಿ ಬಂದು ಪ್ರಕರಣಗಳನ್ನು ದಾಖಲಿಸುತ್ತಿದ್ದು ಪ್ರಕರಣದ ಅಗಾಧತೆಯನ್ನು ಕಂಡು ಪೊಲೀಸರೆ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ಸಂಗೀತ, ನಾಟಕ ಮುಂತಾದ ತರಬೇತಿ ನೀಡುವ ನೆಪದಲ್ಲಿ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿದ್ದ ಚಂದ್ರ ಹೆಮ್ಮಾಡಿ ಅಲ್ಲಿನ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಲಕರ ಜೊತೆ ಸಖ್ಯ ಬೆಳೆಸುತ್ತಿದ್ದ. ಬಳಿಕ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಈತ ಚೂರಿ ತೋರಿಸಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.   

ಚಂದ್ರ ಕೆ ಹೆಮ್ಮಾಡಿಯ ವಿರುದ್ಧ ಇನ್ನೂ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನ್ಯಾಯಾಲಯದಲ್ಲಿ ತನ್ನ ಪರ ವಕೀಲರೊಬ್ಬರು ಇದ್ದಾರೆ ಎಂದು ಚಂದ್ರ ಕೆ ಹೆಮ್ಮಾಡಿ ಹೇಳಿಕೊಂಡಿದ್ದರೂ ಸಹ ಯಾವುದೆ ವಕೀಲರು ನ್ಯಾಯಾಲಯದಲ್ಲಿ ಆತನ ಪರ ಯಾವುದೆ ವಕೀಲರು ಹಾಜರಾಗಿರಲಿಲ್ಲ.

ಸದ್ಯ ಈ ಪ್ರಕರಣ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ