ಮತ್ತೆ ಬಂದಿದೆ ಕಾರ್ಟೂನು ಹಬ್ಬ: ಕುಂದಾಪುರವೀಗ ‘ಕಾರ್ಟೂನ್ ಕಾಶಿ’

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನೂರಾರು ವರ್ಷಗಳಿಂದ ಕುಂದಾಪುರದ ಕುಂದೇಶ್ವರ ದೀಪೋತ್ಸವ ಈ ಪರಿಸರದ ಜನರನ್ನು ಸೆಳೆಯುತ್ತಿದ್ದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಕುಂದೇಶ್ವರ ದೀಪೋತ್ಸವದ ಸಮಯದಲ್ಲಿ ಕುಂದಾಪುರ ನಗರಿ ರಾಜ್ಯ, ರಾಷ್ಟ್ರದ ಗಮನವನ್ನೆ ಸೆಳೆಯುತ್ತಿದೆ. ಇದಕ್ಕೆ ಕಾರಣ ಅಂತರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ ಆಚಾರ್ಯ ಮತ್ತು ಅವರ ತಂಡ ಇಲ್ಲಿ ಪ್ರತಿ ವರ್ಷವೂ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ. ಈ ಬಾರಿಯ ಕಾರ್ಟೂನ್ ಹಬ್ಬ ಡಿಸೆಂಬರ್ 6ರಿಂದ 9ರ ತನಕ ನಡೆಯಲಿದ್ದು ದೀಪೋತ್ಸವದ ಹಣತೆಗಳ ನಡುವೆ ಹಾಸ್ಯದ ಹೊನಲು ಹರಿಯಲಿದೆ.

ಪ್ರತಿ ವರ್ಷ ನಡೆಯುವ ಕಾರ್ಟೂನ್ ಹಬ್ಬಕ್ಕೆ ಕುಂದಾಪುರದಲ್ಲಿ ಸೇರುವ ದೇಶಾದ್ಯಂತದ ಕಾರ್ಟೂನಿಸ್ಟ್‌ಗಳು, ಕಾರ್ಟೂನ್ ಪ್ರಿಯರು, ಕಾರ್ಟೂನ್ ಕಲೆ ಕಲಿಯುವವರು ಮುಂತಾದವರನ್ನು ಕಂಡರೆ ಮುಂದಿನ ದಿನಗಳಲ್ಲಿ ಕುಂದಾಪುರ ನಗರಿ ‘ಕಾರ್ಟೂನ್ ಕಾಶಿ’ ಎಂದು ಕರೆಯಲ್ಪಟ್ಟರು ಅಚ್ಚರಿ ಇಲ್ಲ.  

ಸತೀಶ್ ಆಚಾರ್ಯ ಅವರ ಮಹತ್ವಾಕಾಂಕ್ಷೆಯ ಕೂಸಾದ ಈ ಕಾರ್ಟೂನ್ ಹಬ್ಬ ಇದೀಗ ಐದನೆ ವರ್ಷಕ್ಕೆ ಕಾಲಿಡುತ್ತಿದ್ದು ನಾಲ್ಕು ದಿನಗಳ ಕಾಲ ಈ ಹಬ್ಬ ಅದ್ದೂರಿಯಾಗಿ ನಡೆಯಲಿದೆ. ಕುಂದಾಪುರದ ಜ್ಯೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ನಡೆಯುವ ಕಾರ್ಟೂನ್ ಹಬ್ಬದ ಅಂಗವಾಗಿ ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಟೂನ್ ಹಬ್ಬದ ಹಾಸ್ಯದ ಡಬ್ಬದಲ್ಲಿ ಈ ಬಾರಿ ಕುಂದಾಪುರ ಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ ಸ್ಪರ್ದೆಯೂ ಸೇರಿಕೊಂಡಿದೆ. ‘ಬದುಕಿನ ಪಯಣ ನಗುವಿನ ನಿಲ್ದಾಣ’ ಈ ಬಾರಿಯ ಕಾರ್ಟೂನ್ ಹಬ್ಬದ ಧ್ಯೇಯವಾಕ್ಯವಾಗಿದೆ.

ಡಿಸೆಂಬರ್ 6 ರಂದು 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು ಕನ್ನಡದ ಹೆಸರಾಂತ ಸಾಹಿತಿ ಜಯಂತ ಕಾಯ್ಕಿಣಿ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಲಿದ್ದಾರೆ.  ಈ ಸಮಾರಂಭದಲ್ಲಿ ಮುಂಬೈನ ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ, ದಯಾಸಾಗರ ಚೌಟ, ಮಂಗಳೂರಿನ ಫೋಟೊಪತ್ರಕರ್ತ ಯಜ್ಞ, ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್, ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು. ಕೆ. ಕುಮಾರನಾಥ್ ಭಾಗವಹಿಸಲಿದ್ದು ಮುಂಬೈಯ ಮಿಡ್‌ಡೆ ಪತ್ರಿಕೆಯ ಪತ್ರಕರ್ತ ಸುರೇಶ್. ಕೆ. ಕರ್ಕೇರಾ ಅವರಿಗೆ ಸನ್ಮಾನ ಕಾರ್ಯಕ್ರಮವೂ ಇದೆ.

ಇದೇ ದಿನ ಮುಂಬೈನಲ್ಲಿ ಬದುಕು ಕಟ್ಟಿಕೊಂಡ ಕಲಾವಿದರು, ಪತ್ರಕರ್ತರು ಮತ್ತು ಬರಹಾಗರರ ಸಮ್ಮಿಲನವೂ ನಡೆಯಲಿದೆ.

ಡಿಸೆಂಬರ್ 7 ಕಾರ್ಟೂನ್ ಹಬ್ಬದ ಎರಡನೆಯ ದಿನ. ಈ ದಿನ ಹ್ಯಾಶ್‌ಟ್ಯಾಗ್ ಹರಟೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ವಸ್ಥ ಸೈಬರ್ ಜೀವನ ಎಂಬ ಗುರಿಯನ್ನಿಟ್ಟುಕೊಂಡು ನಡೆಯುವ ಈ ಹರಟೆಯಲ್ಲಿ ಸೋಷಿಯಲ್ ಮೀಡಿಯಾದ ಕುರಿತು ಚರ್ಚೆ ನಡೆಯಲಿದೆ. ಕುಂದಾಪುರದ ಸಹಾಯಕ ಆಯುಕ್ತ ಭೂಬಾಲನ್ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಾಜಾರಾಂ ತಲ್ಲೂರು ದಿಕ್ಸೂಚಿ ಭಾಷಣ ನೀಡಲಿದ್ದಾರೆ. ವಿವಿಧ ಪತ್ರಕರ್ತರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಅಭಿಪ್ರಾಯ ಮಂಡಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ‘ಕಾರ್ಟೂನು ಕಲಿ’ ಎಂಬ ಕಾರ್ಟೂನ್ ಕಾರ್ಯಾಗಾರವೂ ನಡೆಯಲಿದೆ.

ಕಾರ್ಟೂನ್ ಹಬ್ಬದ ಮೂರನೆಯ ದಿನ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ‘ಟೂನ್ ಟೈಂಪಾಸ್’- ಕಾರ್ಟೂನು ಪ್ರಿಯರಿಗೆ ಓಪನ್ ಸ್ಟೇಜ್ ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗಾಗಿ ‘ಕಾರ್ಟೂನು ಮೊಗ್ಗು’ ಎಂಬ ವ್ಯಂಗ್ಯಚಿತ್ರ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಉದ್ಯಮಿ ದತ್ತಾನಂದ ಗಂಗೊಳ್ಳಿ ಚಾಲನೆ ನೀಡಲಿದ್ದಾರೆ. ಮಾಯಾ ಕಾಮತ್ ಸ್ಮರಣಾರ್ಥ ನಡೆಯುವ ಕಾರ್ಟೂನು ಸ್ಪರ್ಧೆಯಲ್ಲಿ ಸುಮಾರು 1 ಲಕ್ಷ ಮೊತ್ತದ ಬಹುಮಾನಗಳನ್ನು ನೀಡಲಾಗುತ್ತದೆ.

ಕಾರ್ಟೂನ್ ಹಬ್ಬದ ಕೊನೆಯ ದಿನ ಡಿಸೆಂಬರ್ 9 ರಂದು ಬೆಳಿಗ್ಗೆ 10 ಗಂಟೆಗೆ ಖ್ಯಾತ ವ್ಯಂಗ್ರಚಿತ್ರಕಾರರಾದ ಹರಿಣಿ, ರಘುಪತಿ ಶೃಂಗೇರಿ ಮತ್ತು ಚಂದ್ರ ಗಂಗೊಳ್ಳಿ ಮಾಸ್ಟರ್ ಸ್ಟ್ರೋಕ್ಸ್ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಉದ್ಘಾಟಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ, ನ್ಯಾಯವಾದಿ ರವಿಕಿರಣ ಮುರ್ಡೇಶ್ವರ, ಡಾ. ವೆಂಕಟರಾಮ ಉಡುಪ, ಉದ್ಯಮಿ ಬೀಜಾಡಿ ನರಸಿಂಹ, ನೇತ್ರ ತಜ್ಞ ಡಾ. ಶ್ರೀಕಾಂತ ಶೆಟ್ಟಿ, ಪತ್ರಕರ್ತ ಲಕ್ಷ್ಮಿ ಮಚ್ಚಿನ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯೂ ನಡೆಯಲಿದೆ.

ಡಿಸೆಂಬರ್ 6 ರಂದು ಸಂಜೆ ನಿಂತ್ಕ ಕಾಮಿಡಿ- ಕೂತ್ಕಂಡ್ ನಗಾಡಿ ಎಂಬ ಕುಂದಾಪ್ರ ಕನ್ನಡದ ಕಾಮಿಡಿ ಸ್ಪರ್ಧೆ ನಡೆಯಲಿದ್ದು ಸಮಾರೋಪ ಸಮಾರಂಭದ ಬಳಿಕ ಕುಂದಾಪ್ರ ಕನ್ನಡದ ಯುವ ಹಾಸ್ಯ ಕಿಲಾಡಿ ಚೇತನ್ ನೈಲ್ಯಾಡಿ ಇವರಿಂದ ‘ಕುಂದಾಪ್ರ ಕನ್ನಡ ನಗೆ ಸ್ಟೇಶನ್’ ಎಂಬ ಕಾಮಿಡಿ ಕಾರ್ಯಕ್ರಮ ನಡೆಯಲಿದೆ.
 
ಪ್ರತಿ ದಿನ ಸಂಜೆ ಚಿತ್ರ ನಿಧಿ ನಡೆಯಲಿದ್ದು, ಸ್ಕೂಲ್ ಟೂನ್ ಚಾಂಪ್ಯನ್ಶಿಪ್, ಕ್ಯಾರಿಕೇಚರ್ ಸ್ಪರ್ಧೆ, ಡೈಲಾಗ್ ಬರೆಯುವ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಹಿಂದಿನಂತೆಯೆ ಈ ಬಾರಿಯೂ ಚಿತ್ರನಿಧಿ ಸಂಗ್ರಹಿಸಿ ದೇಣಿಗೆ ನೀಡುವ ಯೋಜನೆಯೂ ಇದೆ. ಖ್ಯಾತ ವ್ಯಂಗ್ಯ ಚಿತ್ರಕಾರ ದಿವಂಗತ ರಾವ್ ಬೈಲ್ ಅವರಿಗೆ ಈ ಕಾರ್ಟೂನ್ ಹಬ್ಬದಲ್ಲಿ ಕಾರ್ಟೂನು ನಮನ ಸಲ್ಲಿಸಲಾಗುತ್ತದೆ.

ಹಿಂದಿನ ಕಾರ್ಟೂನ್ ಹಬ್ಬಗಳ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಸತೀಶ ಆಚಾರ್ಯ ಮತ್ತು ಅವರ ತಂಡ ಈ ಬಾರಿಯ ಕಾರ್ಟೂನ್ ಹಬ್ಬವನ್ನು ಹಿಂದೆಂದಿಗಿಂತಲೂ ವಿಶಿಷ್ಟವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ನಾಲ್ಕು ದಿನಗಳ ಈ ಕಾರ್ಟೂನ್ ಹಬ್ಬ ಅಪಾರ ಜನಸಾಗರವನ್ನು ಆಕರ್ಷಿಸಲಿದ್ದು ಕುಂದಾಪುರ ನಗರದ ಸಾಂಸ್ಕೃತಿಕ ಶ್ರೀಮಂತಿಕೆಗೆ ಇನ್ನಷ್ಟು ಮೆರುಗು ನೀಡಲಿದೆ.  
 

 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ