ಪಾಕಿಸ್ತಾನದ ಅಮಾಯಕ ವಿದ್ಯಾರ್ಥಿಗಳನ್ನು ಉಗ್ರಗಾಮಿಗಳೆಂದು ಘೋಷಿಸಿದ ದೆಹಲಿ ಪೊಲೀಸ್!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತಕ್ಕೆ ನುಸುಳಿರುವ “ಉಗ್ರಗಾಮಿಗಳು” ಎಂದು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ ಫೋಟೊದಲ್ಲಿರುವ ಇಬ್ಬರು ಯುವಕರು ಪಾಕಿಸ್ತಾನದ ಫೈಸಲಾಬಾದ್‌ನ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಎಂಬ ವಿಚಾರ ಈಗ ಬಹಿರಂಗಗೊಂಡಿದ್ದು ದೆಹಲಿ ಪೊಲೀಸರು ಮತ್ತು ಈ ಸುದ್ದಿಯನ್ನು ಪ್ರಕಟಿಸಿದ ಭಾರತದ ಮಾಧ್ಯಮಗಳು ಭಾರಿ ಮುಜುಗರಕ್ಕೆ ಈಡಾಗಿವೆ.

ಇಬ್ಬರು ಯುವಕರು ಪಾಕಿಸ್ತಾನಿ ಉಗ್ರರಾಗಿದ್ದು ಅವರಿಬ್ಬರಿಂದ ನವದೆಹಲಿ ಸೇರಿದಂತೆ ಭಾರತದ ಹಲವು ನಗರಗಳಿಗೆ ವಿಪತ್ತು ಕಾದಿದೆ ಎಂದು ದೆಹಲಿ ಪೊಲೀಸರು ನವೆಂಬರ್ 20ರಂದು ಇಬ್ಬರು ಯುವಕರ ಫೋಟೊಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು. ಇಬ್ಬರ ಫೋಟೊಗಳನ್ನು ರೈಲು, ವಿಮಾನ ನಿಲ್ದಾಣ ಒಳಗೊಂಡಂತೆ ಹಲವೆಡೆ ಪೊಲೀಸರು ಗೋಡೆಗಳಿಗೆ ಹಚ್ಚಿ ಹೈ ಎಲರ್ಟ್ ಘೋಷಿಸಿದ್ದರು. ಭಾರತದ ಮಾಧ್ಯಮಗಳಲ್ಲಿ ಈ ಕುರಿತು ವ್ಯಾಪಕವಾಗಿ ಸುದ್ದಿ ಪ್ರಕಟವಾಗಿತ್ತು.

ಆದರೆ ಅಸಲಿ ವಿಚಾರ ಈಗ ಬಹಿರಂಗಗೊಂಡಿದ್ದು ದೆಹಲಿ ಪೊಲೀಸರು ಉಗ್ರಗಾಮಿಗಳು ಎಂದು ಘೋಷಿಸಿದ್ದ ಇಬ್ಬರೂ ಯುವಕರು ಪಾಕಿಸ್ತಾನದ ಫೈಸಲಾಬಾದ್‌ನ ವಿದ್ಯಾರ್ಥಿಗಳಾಗಿದ್ದಾರೆ. ಈ ಇಬ್ಬರೂ ಯುವಕರು ಭಾರತಕ್ಕೆ ಈ ತನಕ ಭೇಟಿ ಮಾಡಿಯೂ ಇಲ್ಲ ಎಂಬುದು ಇದೀಗ ಖಾತರಿಗೊಂಡಿದೆ.

ದೆಹಲಿ ಪೊಲೀಸರು ಈ ಇಬ್ಬರೂ ಯುವಕರನ್ನು ಉಗ್ರಗಾಮಿಗಳೆಂದು ಬಿಡುಗಡೆ ಮಾಡಿದ ಫೋಟೊವನ್ನು ನೋಡಿದ ಫೈಸಲಾಬಾದ್‌ನ ಜಾಮಿಯಾ ಇಮ್ದಾದಿಯಾ ಎಂಬ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮುಫ್ತಿ ಝಾಹಿದ್ ಈ ಇಬ್ಬರೂ ಸಹ ತಮ್ಮ ವಿದ್ಯಾರ್ಥಿಗಳಾಗಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನದೀಮ್ ಮತ್ತು ತಯ್ಯಬ್ ಎಂಬ ಹೆಸರಿನ ಇಬ್ಬರು ಯುವಕರು ಪಾಕಿಸ್ತಾನದ ಹೊರಗೆ ಕಾಲಿಟ್ಟವರೂ ಅಲ್ಲ ಎಂದು ಅವರು ಹೇಳಿದ್ದಾರೆ.

ಅಸಲಿ ವಿಷಯ ಗೊತ್ತೆ?
ಫೈಸಲಾಬಾದ್‌ನಲ್ಲಿ ಕಲಿಯುತ್ತಿರುವ ನದೀಮ್ ಮತ್ತು ತಯ್ಯಬ್ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದಕ್ಕಾಗಿ ಲಾಹೋರಿಗೆ ಆಗಮಿಸಿದ್ದರು. ಒಟ್ಟು ನಾಲ್ಕು ವಾಹನಗಳಲ್ಲಿ ಫೈಸಲಾಬಾದ್‍ನಿಂದ ಲಾಹೋರ್ಗೆ ಜನರು ಆಗಮಿಸಿದ್ದು ಆ ತಂಡದಲ್ಲಿ ನದೀಮ್ ಮತ್ತು ತಯ್ಯಬ್ ಇಬ್ಬರೂ ಇದ್ದರು. ಈ ವೇಳೆ ಲಾಹೋರ್‌ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದ ನದೀಮ್ ಮತ್ತು ತಯ್ಯಬ್ ಒಂದು ಮೈಲಿಗಲ್ಲಿನ ಬಳಿ ನಿಂತು ಫೋಟೊ ತೆಗೆಸಿಕೊಂಡಿದ್ದರು. ಈ ಮೈಲಿಗಲ್ಲಿನಲ್ಲಿ ದೆಹಲಿ 360 ಕಿಲೊಮೀಟರ್ ಮತ್ತು ಫಿರೋಝ್ಪುರ್ 9 ಕಿಲೊಮಿಟರ್ ಎಂದು ಬರೆದಿತ್ತು. ಈ ಫೋಟೊವನ್ನು ನದೀಮ್ ತಮ್ಮ ವಾಟ್ಸ್ಯಾಪ್ ಪ್ರೊಫೈಲ್ ಪಿಕ್ಚರ್ ಆಗಿ ಹಾಕಿಕೊಂಡಿದ್ದರು. ಈ ಫೋಟೊ ಅದು ಹೇಗೆ ದೆಹಲಿ ಪೊಲೀಸರ ತನಕ ತಲುಪಿತೊ ಗೊತ್ತಿಲ್ಲ, ಇದೇ ಫೋಟೊವನ್ನು ಎತ್ತಿಕೊಂಡ ದೆಹಲಿ ಪೊಲೀಸರು ಇಬ್ಬರನ್ನೂ ಭಾರತಕ್ಕೆ ನುಸುಳಿರುವ ಉಗ್ರಗಾಮಿಗಳು ಎಂದು ಘೋಷಿಸಿಬಿಟ್ಟರು.

ಫೋಟೊ ಗಮನಿಸಿದ ಪಾಕಿಸ್ತಾನದ ಮಾಧ್ಯಮಗಳು ಇಬ್ಬರೂ ಯುವಕರನ್ನು ಫೈಸಲಾಬಾದ್‌ನ ಶಿಕ್ಷಣ ಸಂಸ್ಥೆಯಲ್ಲಿ ಪತ್ತೆ ಮಾಡಿದ್ದು ಇಬ್ಬರೂ ಯುವಕರ ಜೊತೆ ಮಾತುಕತೆ ನಡೆಸಿದ ವಿಡಿಯೊಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಿತ್ತರಗೊಂಡು ವೈರಲ್ ಆಗಿವೆ. ಇವರಿಬ್ಬರೂ ವ್ಯಾಸಂಗ ಮಾಡುತ್ತಿದ್ದ ಶಿಕ್ಷಣ ಸಂಸ್ಥೆ ಜಾಮಿಯಾ ಇಮ್ದಾದಿಯಾ ಮುಖ್ಯಸ್ಥರು ಇಬ್ಬರನ್ನೂ ಕೂರಿಸಿ ಪತ್ರಿಕಾಗೋಷ್ಟಿ ನಡೆಸಿ ದೆಹಲಿ ಪೊಲೀಸರ ಬೇಜವಾಬ್ದಾರಿಯನ್ನು ಖಂಡಿಸಿದ್ದಾರೆ. ಅಸಲಿ ವಿಷಯ ಬಹಿರಂಗಗೊಂಡ ಬಳಿಕ ದೆಹಲಿ ಪೊಲೀಸರು ತಮ್ಮ ಪ್ರಮಾದ ಅರಿತು ಇಬ್ಬರೂ ಯುವಕರ ಫೋಟೊಗಳನ್ನು ಹಿಂಪಡೆದಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ