ರೈತರ ಆತ್ಮಹತ್ಯೆ: ಮಂಡ್ಯದಲ್ಲಿ ಪ್ರತಿಭಟನಾ ಸ್ವಾಗತ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ
Nov 24 2018 12:34AM
ಕರಾವಳಿ ಕರ್ನಾಟಕ ವರದಿ

ಮೈಸೂರು: ರೈತರ ಸಾಲವನ್ನು ಶತಾಯಗತಾಯ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ ಬಳಿಕವೂ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು. ಗುರುವಾರ ದಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.
ಮಂಡ್ಯ ಜಿಲ್ಲೆ ಕನ್ನಹಟ್ಟಿ ಗ್ರಾಮದ ಜೈಕುಮಾರ (43), ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ತಗ್ಗಹಳ್ಳಿ ಗ್ರಾಮದ ಬಿಳಿಮಯ್ಯ ಆತ್ಮಹತ್ಯೆ ಶರಣಾಗಿದ್ದಾರೆ.
ಇಬ್ಬರು ರೈತರ ಆತ್ಮಹತ್ಯೆಗಳು ಇದೀಗ ಸರ್ಕಾರದ ವಿರುದ್ಧ ಪ್ರತಿಭಟನೆ ಭುಗುಲೇಳುವಂತೆ ಮಾಡಿದೆ. ಕಾರ್ಯಕ್ರಮವೊಂದಕ್ಕೆ ಉದ್ಘಾಟನೆ ಮಾಡಲು ಸಿಎಂ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಗೆ ಭೇಟಿ ನೀಡುವುದಕ್ಕೂ ಕೆಲ ಗಂಟೆಗಳ ಮುನ್ನ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.
ಇದರಂತೆ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ರೈತರು ಮುಖ್ಯಮಂತ್ರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಕೆಲ ರೈತ ಸಂಘ ಕಾರ್ಯಕರ್ತರು ಹಾಗೂ ಪ್ರತಿಭಟನಾ ನಿರತ ರೈತರನ್ನು ಬಂಧನಕ್ಕೊಳಪಡಿಸಿದರು.
ಪ್ರತಿಭಟನೆ ವೇಳೆ ರೈತನ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರ ನೀಡಬೇಕು. ಪಕ್ಕದ ದುದ್ಧ ಗ್ರಾಮದಲ್ಲಿ ಕೆರೆ ನೀರು ತುಂಬಿಸುವ ಯೋಜನೆ ಉದ್ಘಾಟನೆಗೆ ಆಗಮಿಸುತ್ತಿರುವ ಕುಮಾರಸ್ವಾಮಿಯವರು ತಮ್ಮ ಗ್ರಾಮಕ್ಕೆ ಬಂದು ಮೃತ ರೈತನ ಅಂತಿಮ ದರ್ಶನ ಪಡೆಯಬೇಕು. ಸ್ಥಳದಲ್ಲಿಯೇ ಪರಿಹಾರ ಘೋಷಿಸಬೇಕೆಂದು ಕೆಲ ಗ್ರಾಮಸ್ಥರು ಒತ್ತಾಯಿಸಿದರು.
ವಿಷಯ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕನ್ನಹಟ್ಟಿಗೆ ತೆರಳಿ ಜೈಕುಮಾರ ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಪರಿಹಾರ ಮೊತ್ತದ ವಿಚಾರವಾಗಿ ಗ್ರಾಮಸ್ಥರು ಹಾಗೂ ಸಚಿವ ಪುಟ್ಟರಾಜು ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮಸ್ಥರು ರೂ.15 ಲಕ್ಷ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು. ಸರ್ಕಾರದ ನಿಯಮಾವಳಿ ಪ್ರಕಾರ ರೂ.5 ಲಕ್ಷ ಪರಿಹಾರ, ಮೃತರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ರೂ.5 ಲಕ್ಷ ಠೇವಣಿ ಇಡುವುದಾಗಿ ಸಚಿವರು ಭರವಸೆ ನೀಡಿದ ಬಳಿಕ ರೈತರು ಶಾಂತರಾದರು.