Mangalore Muslims Page ಮತ್ತು ಕರಾವಳಿಯ ಪೊಲೀಸರು!

-ಶಶಿಧರ ಹೆಮ್ಮಾಡಿ

Mangalore Muslims Page ಅಲ್ಲಿ ನಿನ್ನೆ ಅನಂತ ಕುಮಾರ್ ಅವರ ನಿಧನರಾದ ಬಳಿಕ ಹಾಕಿದ ಪೋಸ್ಟ್ ತುಂಬಾ ವಿವಾದಕ್ಕೆ ಎಡೆ ಮಾಡಿ ಹಲವರಲ್ಲಿ ಆಕ್ರೋಶ ಮೂಡಿಸಿದೆ. ಕೆಲವೇ ಕೆಲವು ಮುಸ್ಲಿಂ ಯುವಕರು ನಡೆಸುತ್ತಿರಬಹುದಾದ ಈ ಫೇಸ್‌ಬುಕ್ ಪೇಜ್‌ಗೂ ಮಂಗಳೂರಿನ ಸಾಮಾನ್ಯ ಮುಸ್ಲಿಮರಿಗೂ ಸಂಬಂಧವಿರದಿದ್ದರೂ ನಿನ್ನೆ ಮಂಗಳೂರಿನ ಅನೇಕ ಮುಸ್ಲಿಮರು ಈ ಪೇಜ್ ಪ್ರಕಟಿಸಿದ ಪೋಸ್ಟ್‌ಗೆ ವಿರೋಧ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಮತ್ತು ತದ ನಂತರದಿಂದ ಇಂದಿನ ತನಕ ದೇಶದಲ್ಲಿ ನಡೆಯುತ್ತಿರುವ ಮುಸ್ಲಿಮರ ವಿರುದ್ಧದ ದೌರ್ಜನ್ಯ, ಹಿಂಸೆ, ಕೊಲೆ, ದೊಂಬಿಗಳಿಂದ ಹತಾಶರಾಗಿರುವ, ರೊಚ್ಚಿಗೆದ್ದಿರುವ ಮುಸ್ಲಿಂ ಯುವಕರ ಆಕ್ರೋಶ ನಮ್ಮ ಊಹೆಗೂ ನಿಲುಕದ್ದು. ಭಾರತದ ಇಂದಿನ ಮುಸ್ಲಿಮರ ಈ ಸ್ಥಿತಿಗೆ ಭಾಜಪ ಮತ್ತು ಅದರಲ್ಲಿ ತೀರಾ ಕಟ್ಟರ್‌ವಾದಿ ಸಿದ್ಧಾಂತದ ಗುಂಪಿನಲ್ಲಿಯೆ ಗುರುತಿಸಿಕೊಂಡಿದ್ದ ಅನಂತ ಕುಮಾರ್ ಕೂಡ ಕಾರಣರು ಎಂಬುದು  ಕರ್ನಾಟಕದ ಮುಸ್ಲಿಮರಿಗೂ, ಪ್ರಜ್ಞಾವಂತರಿಗೂ ಗೊತ್ತು. ಅದನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅನಂತ ಕುಮಾರ್ ವಿರುದ್ಧದ ಆಕ್ರೋಶ ಮುಸ್ಲಿಮ್ ಪೇಜ್‌ನಲ್ಲಿ ಹಾಗೆ ವ್ಯಕ್ತವಾಗಿರಬಹುದು. ಆದರೆ ಆ ಭಾಷೆ, ಬರಹವನ್ನು ಸಮರ್ಥಿಸಲಾಗದು. ಅದೊಂದು ಅಸಂಬದ್ದ, ಅಮಾನವೀಯ ಮತ್ತು ವಿಕೃತ ಅಭಿರುಚಿಯ ಪೋಸ್ಟ್ ಎಂದು ಮಂಗಳೂರಿನ ಮುಸ್ಲಿಮರೆ ಹೇಳುತ್ತಿದ್ದಾರೆ.
 
ಅನಂತ ಕುಮಾರ್ ನಿಧನರಾದರು ಎಂಬ ಕಾರಣಕ್ಕೆ ಸಜ್ಜನರು, ಸಂಪನ್ನರು ಎಂದೆಲ್ಲ ಹೊಗಳಲೇಬೇಕಾಗಿಲ್ಲ. ಈಗಷ್ಟೆ ನಿಧನರಾಗಿದ್ದಾರೆ, ವಿಮರ್ಶೆ ಮಾಡಲು ಕಾಲವಿದೆ. ಕಾಯಬೇಕು. ಅದನ್ನು ಬಿಟ್ಟು ತೀರಾ ಅಮಾನವೀಯವಾಗಿ ನಿಂದಿಸುವ, ಬೈಗಳದ ಪೋಸ್ಟ್‌ಗಳನ್ನು ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಉಲ್ಟಾ ಅದು ಕರಾವಳಿಯಲ್ಲಿ ಬಿಜೆಪಿಗೆ ಇನ್ನಷ್ಟು ಮತಗಳನ್ನು ಸೆಳೆಯಲು, ನಾಳೆ ಮತ್ತೆ ಕಾಂಗ್ರೆಸ್ ಪಕ್ಷವೇ ಇದಕ್ಕೆ ಹೊಣೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಹಿಂದೂ ವಿರೋಧಿ ಎಂದು ಬಿಂಬಿಸಲು ನೆರವಾಗಬಹುದು, ಅಷ್ಟೆ. ಹೀಗಾಗಿ ಈ ಪೇಜ್ ಹೆಚ್ಚು ಸಂಯಮದಿಂದ, ಸಭ್ಯತೆಯಿಂದ ಕೆಲಸ ಮಾಡಬೇಕು.ಕರಾವಳಿಯಲ್ಲಿರುವ ಸಾವಿರಾರು ಮುಸ್ಲಿಂ ಯುವಕರು ಹಿಂದೂತ್ವದ ಕೋಮುವಾದ ಮತ್ತು ಹಿಂಸೆಯ ವಿರುದ್ಧ ಪ್ರಜಾಸತ್ತಾತ್ಮಕವಾಗಿ, ಸಹನೆ ಮತ್ತು ಶಾಂತಿಯಿಂದ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ರಾಜಕೀಯ ಷಡ್ಯಂತ್ರದ ಹಿಂದೂತ್ವ ಎಷ್ಟೆ ಹಿಂಸಾತ್ಮಕ ರೂಪ ಪಡೆದರೂ ಕರಾವಳಿ ಹೆಚ್ಚಾಗಿ ಶಾಂತಿಯಿಂದ ಇರಲು ಬಹು ಪಾಲು ಕಾರಣ ಇಲ್ಲಿನ ಮುಸ್ಲಿಮ್ ಯುವಜನರ ಸಹನೆ ಮತ್ತು ಸಹಬಾಳ್ವೆಯ ಕುರಿತು ಅವರಿಗಿರುವ ಕಾಳಜಿ. ಇದನ್ನು ದುಬೈಯಲ್ಲೊ, ಸೌದಿಯಲ್ಲೊ ಕೂತು ಪೇಜ್ ನಡೆಸುವ ಯುವಕರು ಅರಿಯಬೇಕಾಗಿದೆ. ಈ ಪೇಜ್‌ನ ಪೋಸ್ಟ್‌ಗಳು ಈಗಾಗಲೇ ಆತಂಕ ಮತ್ತು ಭೀತಿಯಲ್ಲಿ ಬದುಕುವ ಕರಾವಳಿಯ ಮುಸ್ಲಿಮರ ಬದುಕನ್ನು ಮತ್ತಷ್ಟು ಆತಂಕಕ್ಕೆ ದೂಡುತ್ತವೆ, ಸಂಘಿಗಳು ಇದರ ಲಾಭ ಪಡೆದು ಇಲ್ಲಿನ ಮುಸ್ಲಿಮರನ್ನು ಮತ್ತೆ ಮತ್ತೆ ಗುರಿಯಾಗಿಸುತ್ತಾರೆ ಎಂಬ ಕನಿಷ್ಟ ಜ್ಞಾನ ಪೇಜ್ ನಡೆಸುವ ಎಡ್ಮಿನ್‌ಗಳಿಗೆ ಇರಬೇಕು. ಯಾವುದೆ ಪೋಸ್ಟ್ ಇರಲಿ ಭಾಷೆ ಮತ್ತು ಪದಗಳು ಸರಿ ಇರದಿದ್ದರೆ ಅದನ್ನು ಯಾರೂ ಬೆಂಬಲಿಸಲು, ಇಷ್ಟಪಡಲು ಸಾಧ್ಯವಿಲ್ಲ.

ಅಂದ ಹಾಗೆ ಇಲ್ಲಿಯೂ ಇನ್ನೊಂದು ವಿಚಾರ ಹೇಳಲೇಬೇಕು. ನಿನ್ನೆ ಯಾವ Mangalore Muslims Page ಅಲ್ಲಿ ಅನಂತ್ ಕುಮಾರ್ ಬಗ್ಗೆ ಪೋಸ್ಟ್ ಹಾಕಿ ಅದು ವಿವಾದಕ್ಕೆ ಮತ್ತು ಪೊಲೀಸರಿಂದ ಸ್ವಯಂಪ್ರೇರಿತ ಕೇಸು ದಾಖಲಿಸಿ ತನಿಖೆಗೆ ಕಾರಣವಾಯಿತೊ ಅಂತಹ ನೂರಾರು ಅಲ್ಲಲ್ಲ ಲಕ್ಷಾಂತರ ಪೋಸ್ಟ್‌ಗಳನ್ನು ಕರಾವಳಿಯ ಮತ್ತು ರಾಜ್ಯದ ವಿವಿಧೆಡೆಯಿಂದ ನಡೆಸಲ್ಪಡುತ್ತಿರುವ ಹಿಂದೂತ್ವವಾದಿಗಳ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಿಂದೆ ಪ್ರಕಟಗೊಂಡಿವೆ. ಮುಸ್ಲಿಮರು, ಕ್ರೈಸ್ತರು, ಕಾಂಗ್ರೆಸ್ ನಾಯಕರು ಮುಂತಾದವರ ಬಗ್ಗೆ ಇದರ ನೂರು ಪಟ್ಟು ಹೆಚ್ಚು ವಿಕೃತವಾಗಿ, ಕೊಳಕಾಗಿ ನಿಂದಿಸುವ ಪೋಸ್ಟ್‌ಗಳನ್ನು ಹಿಂದೂತ್ವವಾದಿಗಳ ಪೇಜ್‌ಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ಅವರ ಮಗನ ಸಾವು, ಮೊನ್ನೆಯಷ್ಟೆ ವಿಚಾರವಾದಿ ಜಹೋನಾ ನಿಧನ, ಗೌರಿ ಲಂಕೇಶ್ ಕೊಲೆ ಮುಂತಾದ ಇಂತಹ ನೂರಾರು ಸಂದರ್ಭಗಳಲ್ಲಿ ಎಂತೆಂತಹ ವಿಕೃತ ಪೋಸ್ಟ್‌ಗಳು ಅಲ್ಲೆಲ್ಲ ಪ್ರಕಟಗೊಂಡಿವೆ. ಆದರೆ ಮಾಧ್ಯಮಗಳು ಆ ಪೇಜ್‌ಗಳ ವಿಕೃತಿಗಳ ಬಗ್ಗೆ ವರದಿ ಮಾಡುವುದೇ ಇಲ್ಲ. ಅಂತಹ ಫೇಸ್‌ಬುಕ್ ಪುಟಗಳು ಮತ್ತು ಪೋಸ್ಟ್‌ಗಳ ವಿರುದ್ಧ ಮಾಹಿತಿ ನೀಡಿದರೂ ಸಹ ಸೈಬರ್ ಪೊಲೀಸರು ಯಾವುದೆ ಕ್ರಮ ಕೈಗೊಂಡ ನಿದರ್ಶನ ಇಲ್ಲ ಅಥವಾ ಇದ್ದರೂ ತೀರಾ ಕಡಿಮೆ. 

ಏನಿದ್ದರೂ ಕರಾವಳಿಯ ಪೊಲೀಸರಂತೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸಂಘಪರಿವಾರದ ಪರವಾಗಿಯೇ ಇರುವವರು ಎಂಬುದು ಕಟು ಸತ್ಯ. Mangalore Muslims Page ವಿರುದ್ಧ ಕೈಗೊಂಡ ಕ್ರಮ ಇತರ ಹಿಂದೂತ್ವವಾದಿ, ಬಜರಂಗಿ ಪಡೆಗಳ ಸೋಷಿಯಲ್ ಮೀಡಿಯಾ ಚಟುವಟಿಕೆಯ ವಿರುದ್ಧವೂ ಜರಗಿದರೆ ಮಾತ್ರ ಕರಾವಳಿಯ್ಸ ಪೊಲೀಸರಿಗೆ ಸೆಕ್ಯೂಲರಿಸಂ, ಶಾಂತಿ, ಸಹಬಾಳ್ವೆಯ ಕುರಿತು ನೈಜ್ ಕಾಳಜಿ ಇದೆ ಎಂದು ಸಮಾಧಾನಪಡಬಹುದು. Mangalore Muslims Page  ಅನಂತ ಕುಮಾರ್ ಬಗ್ಗೆ ಹಾಕಿದ ಪೋಸ್ಟ್ ಅನ್ನು ವರದಿ ಮಾಡಿದ ಅದೇ ಕಾಳಜಿ, ಶ್ರದ್ಧೆಯಿಂದ ಹಿಂದೂತ್ವವಾದಿ ಕೋಮುವಾದಿಗಾ ಪೇಜ್‌ಗಳಲ್ಲಿ ಹಾಕುವ ಪೋಸ್ಟ್‌ಗಳ ಬಗ್ಗೆಯೂ ವರದಿ ಪ್ರಕಟಿಸಿದರೆ ಅಂತಹ ಮಾಧ್ಯಮಕ್ಕೆ ಕರಾವಳಿಯ ಕುರಿತು ನೈಜ ಕಾಳಜಿ ಇದೆ ಎಂದು ಮೆಚ್ಚಬಹುದು.    
-ಶಶಿಧರ ಹೆಮ್ಮಾಡಿ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ