ವಿದಾಯ ಅನಂತ ಕುಮಾರ್ರ್! ಕೇಂದ್ರ ಸಚಿವ, ಬಿಜೆಪಿ ನಾಯಕ ಅನಂತ ಕುಮಾರ್ ಇನಿಲ್ಲ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕೇಂದ್ರ ಸಚಿವ, ಕರ್ನಾಟಕದ ಜನಪ್ರಿಯ ರಾಜಕಾರಣಿ ಅನಂತ್ ಕುಮಾರ್ (59) ಅವರು ನವೆಂಬರ್ 11ರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ಚಿಕಿತ್ಸೆ ಪಡೆದರೂ ಕ್ಯಾನ್ಸರ್ ವಿರುದ್ದದ ಹೋರಾಟದಲ್ಲಿ ಸೋತು ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ಕೊನೆಯುಸಿರೆಳೆದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದರು. ಅವರು ಪತ್ನಿ ಡಾ. ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತಾ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

1959 ಜುಲೈ 22ರಂದು ಬೆಂಗಳೂರಿನಲ್ಲಿ ಅನಂತಕುಮಾರ್ ಜನನ. ತಂದೆ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿ. ಹುಬ್ಬಳ್ಳಿಯ ಕೆಎಸ್ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು.ಜೆಎಸ್ ಎಸ್ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದ ಅನಂತ್ ಕುಮಾರ್ ಅವರು ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಬಿಜೆಪಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದರು. 1996ರಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ವಾಜಪೇಯಿ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಅನಂತ್ ಕುಮಾರ್ ಅವರ ದೇಹವನ್ನು ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ದೇಶದ ಇತರ ನಾಯಕರು ಕೂಡ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ.

ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಗ್ಗೆ ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ