ಟಿಪ್ಪು ಜಯಂತಿಗೆ ಮುಖ್ಯಮಂತ್ರಿಯೇ ಗೈರು!

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಭಾಗವಹಿಸುತ್ತಿಲ್ಲ ಎಂಬ ಕುತೂಹಲಕಾರಿ ಸಂಗತಿ ವರದಿಯಾಗಿದೆ.

ಮುಖ್ಯಮಂತ್ರಿಯವರಿಗೆ ಮೂರು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಕುಟುಂಬದೊಂದಿಗೆ ಇರಲಿದ್ದಾರೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ನ.10ರಂದು ಬೆಳಿಗ್ಗೆ 11:30ಗೆ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯಮಂತ್ರಿಯವರು ಭಾಗವಹಿಸದ ಕಾರಣ ಆಹ್ವಾನ ಪತ್ರಿಕೆಯಲ್ಲಿಯೂ ಅವರ ಹೆಸರಿಲ್ಲ. ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ವಸತಿ ಸಚಿವ ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಟಿಪ್ಪು ಜಯಂತಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಕಾರ್ಯಕ್ರಮಕ್ಕೆ ಗೈರಾಗುವುದು ಹೊಸ ಪ್ರಶ್ನೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ