ಹಿಂಜಾವೇ ಮುಖಂಡನಿಗೆ ಹಲ್ಲೆ ಕೇಸ್: ಚೈತ್ರಾ ಕುಂದಾಪುರ & ಗ್ಯಾಂಗ್ ಜೈಲಿಂದ ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ಕುಕ್ಕೆ ಸುಬ್ರಹ್ಮಣ್ಯದ ಬೀದಿಕಾಳಗ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಬುಧವಾರ ಜೈಲಿನಿಂದ ಬಿಡುಗಡೆಗೊಂಡರು. ಚೈತ್ರಾ ತಂಡದ ಸುದೀ ಪೂಜಾರಿ, ವಿನಯ, ಮಣಿಕಂಠ, ಹರೀಶ್ ನಾಯಕ್ ಯಾನೆ ಶ್ರೀಕಾಂತ ಮತ್ತು ಹರೀಶ್ ಖಾರ್ವಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನವೆಂಬರ್ 5 ರಂದು ಪುತ್ತೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತೀರ್ಪಿನ ಪ್ರತಿಯನ್ನು ಸುಳ್ಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಸೋಮವಾರ ಸಂಜೆ ತೀರ್ಪು ಪ್ರಕಟವಾಗಿದ್ದರಿಂದ ಅಂದು ನ್ಯಾಯಾಲಯಕ್ಕೆ ತೀರ್ಪಿನ ಪ್ರತಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ.

ನ್ಯಾಯಾಲಯಕ್ಕೆ ಮಂಗಳವಾರ ರಜೆ ಇದ್ದ ಕಾರಣ ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಕೋರ್ಟ್ ನಿಂದ ಮಂಗಳೂರು ಜೈಲಿಗೆ ಜಾಮೀನು ಮಂಜೂರು ಪ್ರತಿ ಸಲ್ಲಿಸಿದ ಬಳಿಕ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ವಿಚಾರಕ್ಕೆ ಸಂಬಂಧಿಸಿ ಹಿಂದೂ ಜಾಗರಣ ವೇದಿಕೆ ಮುಖಂಡ ಗುರು ಪ್ರಸಾದ್ ಪಂಜ ಮೇಲೆ ಹಲ್ಲೆ ಪ್ರಕರಣದ ವಿಚಾರಣೆ ನವೆಂಬರ್ 3 ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಆದರೆ ಅಂದು ಅನಾರೋಗ್ಯದ ನೆಪವೊಡ್ಡಿ ಚೈತ್ರಾ ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.ಅನಾರೋಗ್ಯ ಎಂದು ಹೇಳಿ ವೆನ್ಲಾಕ್ ಆಸ್ಪತ್ರೆಯಲ್ಲಿದ್ದ ಚೈತ್ರಾಳನ್ನು ನ.5ರಂದು ಜೈಲಿಗೆ ತರಲಾಗಿತ್ತು. ಮೂರು ದಿನ ಜೈಲು ವಾಸದಲ್ಲಿದ್ದಳು.

ನ್ಯಾಯಾಂಗ ಬಂಧನದಲ್ಲಿರುವಾಗ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲಿ ಮಲಗುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಚಾರ. ನಾಟಕವಾಡಬೇಡ ಎಂದು ಚೈತ್ರಾಳನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಧೀಶರು ಈ ಹೊಡೆದಾಟ ಎಲ್ಲಾ ಬಿಟ್ಟು ಒಳ್ಳೆ ರೀತಿಯಲ್ಲಿ ಇರುವಂತೆ ಬುದ್ಧಿವಾದ ಹೇಳಿರುವುದು ಗಮನಾರ್ಹ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ