ಅಪಘಾತದ ಗಾಯಾಳು ವಾಲಿಬಾಲ್ ಪಟು ಅನುಪ್ ಕೋಸ್ತಾ ಚೇತರಿಕೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಅಪ್ರೋಚ್ ಜಂಪ್ ನಲ್ಲಿ ಏಷ್ಯಾದ ನಂ.1 ಆಟಗಾರ ಖ್ಯಾತಿಯ ವಾಲಿಬಾಲ್ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಕುಂದಾಪುರದ ಹಂಗ್ಳೂರಿನ ಅನುಪ್ ಡಿ’ಕೋಸ್ತಾ(24) ಅವರು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಕಳವಳಕಾರಿ ಸಂಗತಿ ವರದಿಯಾಗಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅನುಪ್ ಅವರಿಗೆ ಕೆ.ಎಂ.ಸಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನವಂಬರ್5 ರಂದು ಅನುಪ್ ಅವರು ಬುಲೆಟ್ ನಲ್ಲಿ ಸಂಬಂಧಿಕರೋರ್ವರ ಮನೆಯಿಂದ ಮರಳುತ್ತಿರುವ ಸಂದರ್ಭ ಸಿದ್ದಾಪುರದಲ್ಲಿ ಬುಲೆಟ್ ಸ್ಕಿಡ್ ಆಗಿತ್ತು. ಈ ಸಂದರ್ಭ ನೆಲಕ್ಕೆ ಬಿದ್ದ ಅನುಪ್ ಅವರಿಗೆ ತೀವೃ ಏಟಾಗಿತ್ತು. ಹಿಂಬದಿ ಸವಾರರಾಗಿದ್ದ ಅವರ ಗೆಳೆಯನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಅನುಪ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.|

ಅಪ್ರೋಚ್ ಜಂಪ್ನಲ್ಲಿ ಅನೂಪ್ ಅವರಷ್ಟು ಎತ್ತರಕ್ಕೆ ಜಿಗಿದು ಪ್ರಹಾರಗೈಯುವ ಇನ್ನೊಬ್ಬ ಆಟಗಾರ ಭಾರತದಲ್ಲಿ ಇಲ್ಲ. 365ಸೆ.ಮೀ ಎತ್ತರಕ್ಕೆ ಜಿಗಿಯುವ ಅನೂಪ್ ಏಷ್ಯಾದಲ್ಲೇ ನಂ.1. ಅನೂಪ್ ಡಿ ಕೋಸ್ಟಾ  ಆಲ್ರೌಂಡರ್. ಡಿಫೆನ್ಸ್, ಸ್ಮ್ಯಾಷ್, ಬ್ಲಾಕ್.. ಎಲ್ಲಾ ವಿಭಾಗಗಳಲ್ಲೂ ಆಡಬಲ್ಲರು. 9 ವರ್ಷಗಳಿಂದ ವಾಲಿಬಾಲ್ ಆಡುತ್ತಿದ್ದಾರೆ. ಕೇರಳದ ಟಾಮ್ ಜೋಸೆಫ್ ಹಾಗೂ ಹರಿಯಾಣದ ಸಂಜಯ್ ಅನೂಪ್ ಅವರ ರೋಲ್ ಮಾಡೆಲ್ಗಳು. ಮಸ್ಕತ್, ದುಬೈ, ಕತಾರ್, ಮಾಲ್ಡೀವ್ಸ್ ವಿದೇಶಿ ಕ್ಲಬ್ ತಂಡಗಳಲ್ಲೂ ಆಡಿದ ಅನುಭವಿ ಅನೂಪ್.

ಶಾಲಾದಿನಗಳಲ್ಲಿಯೇ ಗಮನ ಸೆಳೆಯುವಂತೆ ಆಡುತ್ತಿದ್ದ ಅನೂಪ್ ಬೆಂಗಳೂರಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತಂಡದ ಪರ ಐದು ವರ್ಷ ಆಡಿ ಅನುಭವ ಗಳಿಸಿ ನಂತರ ಕ್ರೀಡೆಯಲ್ಲಿ ಎತ್ತರಕ್ಕೆ ಚಿಮ್ಮಿದವರು.

 ಅನೂಪ್ ಹೈದರಾಬಾದ್ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.
2009ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಆಡಿದ ಅನೂಪ್, 2010ರಲ್ಲಿ ರಾಜ್ಯ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. 2011ರಲ್ಲಿ ಭಾರತ ಕಿರಿಯರ ತಂಡ, ಭಾರತ ಯುವ ತಂಡಗಳಿಗೆ ಆಯ್ಕೆಯಾಗಿ ಗಮನ ಸೆಳೆದಿದ್ದರು. 2011ರಲ್ಲಿ ಇರಾನ್ನಲ್ಲಿ ನಡೆದ ಯೂತ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಟೂರ್ನಿಯ ಬೆಸ್ಟ್ ಸ್ಕೋರರ್ ಪ್ರಶಸ್ತಿಗೆ ಭಾಜನರಾಗಿದ್ದರು. 2012ರಲ್ಲಿ ಇರಾನಿನಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್, 2013ರಲ್ಲಿ ಕಿರಿಯರ ಏಷ್ಯನ್ ಚಾಂಪಿಯನ್ಶಿಪ್, ಕಿರಿಯರ ವಿಶ್ವ ಚಾಂಪಿಯನ್ಶಿಪ್ ಗಳಲ್ಲಿ  ತಮ್ಮ ಕ್ರೀಡೆಯ ಮಿಂಚು ತೋರಿಸಿದ್ದಾರೆ. 2013ರಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಪ್ರಶಸ್ತಿ ಪಡೆದರು.  ಭಾರತ ಹಿರಿಯರ ತಂಡದಲ್ಲಿ ಸ್ಥಾನ ಸಿಕ್ಕಿರುವುದು ಅವರ ಪ್ರತಿಭೆಗೆ ಸಿಕ್ಕ ಮನ್ನಣೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಅನೂಪ್ ಸ್ಥಾನ ಪಡೆದಿದ್ದರು. ಕಳೆದ ವರ್ಷ ನಡೆದ ಫೆಡರೇಷನ್ ಕಪ್ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ  ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಪಡೆದು ರಾಜ್ಯ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು.

ಅನೂಪ್ ಅವರು ಅಪಘಾತದಲ್ಲಿ ಗಾಯಗೊಂಡ ಸುದ್ದಿ ಅವರ ಅಪಾರ ಅಭಿಮಾನಿಗಳನ್ನು ಕಳವಳಕ್ಕೀಡು ಮಾಡಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ