ಚೈತ್ರಾ ಕುಂದಾಪುರ ನ್ಯಾಯಾಂಗ ಬಂಧನ ವಿಸ್ತರಣೆ. ಅನಾರೋಗ್ಯದ ನಾಟಕ ಮಾಡಬೇಡ ಎಂದ ನ್ಯಾಯಾಧೀಶರು.

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಬೀದಿಕಾಳಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡದ 6 ಜನರಿಗೆ ಇಂದು ಸೋಮವಾರ ಸುಳ್ಯ ನ್ಯಾಯಾಲಯ ನವೆಂಬರ್.19 ರವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ಗುರು ಪ್ರಸಾದ್ ಮೇಲೆ ಹಲ್ಲೆ ಪ್ರಕರಣದ ವಿಚಾರಣೆ ನವೆಂಬರ್ 3 ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಆದರೆ ಅಂದು ಅನಾರೋಗ್ಯದ ನೆಪವೊಡ್ಡಿ ಚೈತ್ರಾ ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು ಆಕೆಯನ್ನು ಆಂಬುಲೆನ್ಸ್ ಮೂಲಕ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹಾಗೂ ಜೈಲರ್ ಮತ್ತು ಚೈತ್ರಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವೈದ್ಯಕೀಯ ವರದಿಯೊಂದಿಗೆ ಆಗಮಿಸುವಂತೆ ಆದೇಶ ನೀಡಿದ್ದರು.

ಆದರೆ ಇಂದು ಚೈತ್ರಾ ಮಂಗಳೂರಿನಿಂದ ಸುಳ್ಯ ನ್ಯಾಯಾಲಯಕ್ಕೆ ಆಂಬುಲೆನ್ಸ್ ಮೂಲಕ ಆಗಮಿಸದೆ ಉಳಿದ ಆರೋಪಿಗಳಂತೆ ಪೊಲೀಸ್ ವಾಹನದಲ್ಲಿಯೇ ಆಗಮಿಸಿದ್ದಳು. ಆಕೆ ಆರೋಗ್ಯವಂತಳಾಗಿಯೇ ಇರುವುದನ್ನು ಗಮನಿಸಿದ ನ್ಯಾಯಾಧೀಶರು ಗರಂ ಆದರು.

ಬುದ್ಧಿವಾದ ಹೇಳಿದ ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿರುವಾಗ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲಿ ಮಲಗುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಚಾರ. ನಾಟಕವಾಡಬೇಡ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಈ ಹೊಡೆದಾಟ ಎಲ್ಲಾ ಬಿಟ್ಟು ಒಳ್ಳೆ ರೀತಿಯಲ್ಲಿ ಇರುವಂತೆ ಬುದ್ಧಿವಾದ ಹೇಳಿದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ