ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನಿಂದ ಹಿಂಜಾವೇ ಮುಖಂಡನ ಮೇಲೆ ಮಾರಕ ಹಲ್ಲೆ

ಕರಾವಳಿ ಕರ್ನಾಟಕ ವರದಿ

ಸುಬ್ರಹ್ಮಣ್ಯ
: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದದಲ್ಲಿ ಮಧ್ಯ ಪ್ರವೇಶಿಸಿದ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡ ಸುಬ್ರಹ್ಮಣ್ಯದಲ್ಲಿ ಬೀದಿ ಕಾಳಗ ನಡೆಸಿದ್ದು ಹಿಂದೂ ಜಾಗರಣ ವೇದಿಕೆಯ ಮುಖಂಡನೋರ್ವ ಗಾಯಗೊಂಡಿದ್ದಾರೆ.

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಎರಡು ಗುಂಪುಗಳ ನಡುವೆ ಇತ್ತೀಚೆಗೆ ವೈಮನಸ್ಸು ಏರ್ಪಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ  ಚೈತ್ರಾ ಕುಂದಾಪುರ ಮಠದ ಪರವಾಗಿ ಮಾತನಾಡುತ್ತಾ ದೇವಸ್ಥಾನದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ಸ್ಥಳೀಯ ಹಿಂದೂ ನಾಯಕರನ್ನು ಮತ್ತು ದೇವಸ್ಥಾನದ ಭಕ್ತವರ್ಗವನ್ನು ಕೆರಳಿಸಿತ್ತು.

ಈ ವಿಚಾರವಾಗಿ ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ನಡುವೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಿರಂತರ ವಾಗ್ವಾದ ನಡೆಯುತ್ತಿತ್ತು.

ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಹಾಗೂ ಗುರುಪ್ರಸಾದ್ ಪಂಜ ಮತ್ತವರ ಬೆಂಬಲಿಗರ ನಡುವೆ ಸುಬ್ರಹ್ಮಮಣ್ಯದಲ್ಲಿ ಬುಧವಾರದಂದು ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ತಂಡಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಘಟನೆಯಲ್ಲಿ ಗುರುಪ್ರಸಾದ್ ಅವರು ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದ ಗುರುಪ್ರಸಾದ್ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಇತರ 8 ಜನರನ್ನು ಸುಬ್ರಹ್ಮಣ್ಯ ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡೂ ಗುಂಪುಗಳನ್ನು ನಿಯಂತ್ರಿಸಲು ಪೋಲೀಸರು ಲಘು ಲಾಠೀ ಪ್ರಹಾರವನ್ನೂ ನಡೆಸಬೇಕಾಯಿತು.

ಹಲ್ಲೆಯನ್ನು ಖಂಡಿಸಿ ಸುಬ್ರಹ್ಮಣ್ಯದಲ್ಲಿ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ವಿರುದ್ಧ ಸುಬ್ರಹ್ಮಣ್ಯದ ನಾಗರಿಕರು ಮತ್ತು ಭಕ್ತಾದಿಗಳು ಪ್ರತಿಭಟನೆ ನಡೆಸಿದ್ದಾರೆ.

ನಾಲಿಗೆಯ ಮೇಲೆ ಹಿಡಿತವಿಲ್ಲದ ಭಾಷಣಗಳಿಗೆ ಕುಖ್ಯಾತಳಾಗಿರುವ ಚೈತ್ರಾ ಕುಂದಾಪುರ ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ದೈಹಿಕವಾಗಿಯೂ ಹಲ್ಲೆ ನಡೆಸುವ ಹಂತಕ್ಕೆ ತಲುಪಿದ್ದಾಳೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ