ರೋಶು ಬಜ್ಪೆ ಕಿಟಾಳ್ ಯುವ ಪುರಸ್ಕಾರಕ್ಕೆ ಆಯ್ಕೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ರೋಶು, ಬಜ್ಪೆ ಕಾವ್ಯನಾಮದಿಂದಲೇ ಕೊಂಕಣಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಪ್ರತಿಭಾವಂತ ಯುವ ಕವಿ, ಕಥೆಗಾರ, ಹಾಸ್ಯ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾ ಇವರು 2017 ನೇ ಸಾಲಿನ ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ತನ್ನ ಹದಿನಾರನೇ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರೋಶು ಬಜ್ಪೆ  ಮೈಸೂರು ವಿಶ್ವವಿದ್ಯಾಲಯದ ಎಮ್. ಕೊಮ್. ಪದವೀಧರರು. ಹಾಸ್ಯ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ‘ಹಾಸ್ಯ ಎಟ್ಯಾಕ್’ (2015) ಮತ್ತು ‘ಓಪನ್ ಹಾಸ್ಯ ಸರ್ಜರಿ’ (2017) ಎಂಬ ಎರಡು ಹಾಸ್ಯಲೇಖನಗಳ ಸಂಗ್ರಹಗಳನ್ನು ಹೊರತಂದಿದ್ದಾರೆ. ಜಿಲ್ಲಾ / ರಾಜ್ಯಮಟ್ಟದ ಕವಿಗೋಷ್ಟಿಗಳಲ್ಲಿ ಕೊಂಕಣಿಯನ್ನು ಪ್ರತಿನಿಧಿಸಿರುವುದಲ್ಲದೇ, ಕನ್ನಡ ಮತ್ತು ಹಿಂದೀ ಭಾಷೆಯಲ್ಲೂ ಕಥೆ, ಲೇಖನ, ಕವಿತೆಗಳನ್ನು ಬರೆಯುತ್ತಿದ್ದಾರೆ.

ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟಗೊಂಡಿವೆ. ಅನುವಾದ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿರುವ ರೋಶು, ಇತ್ತೀಚೆಗೆ ಲಂಕೇಶರ ನಾಟಕ ‘ಗ್ರಹಸ್ಥಾಶ್ರಮ’ ವನ್ನು ಕೊಂಕಣಿಗೆ ಈ ನಾಟಕ ಈಗಾಗಲೇ ಸಾಕಷ್ಟು ಪ್ರದರ್ಶನಗಳನ್ನು ಕಂಡಿದೆ. ಆಕಾಶವಾಣಿ, ಕೊಂಕಣಿಯ  ಬಹುತೇಕ ನಿಯತಕಾಲಿಕಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಬರಹಗಳು ಸರಾಗವಾಗಿ ಪ್ರಕಟವಾಗುತ್ತಿರುವುದಲ್ಲದೇ, ಸಂಘ - ಸಂಸ್ಥೆಗಳು ಹಾಗೂ ನಿಯತಕಾಲಿಕಗಳು ಏರ್ಪದಿಸುವ ಸಾಹಿತ್ಯ ಸ್ಪರ್ಧೆಗಳಲ್ಲಿ ಪ್ರತೀ ವರ್ಷ ದೊಡ್ಡ ಮೊತ್ತದ ಬಹುಮಾನಗಳನ್ನು ಗಿಟ್ಟಿಸುತ್ತಾ ಬಂದಿವೆ.

ಕೊಂಕಣಿ ಸಾಹಿತ್ಯದ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ 2012 ರಿಂದ ಕೊಂಕಣಿಯ ಖ್ಯಾತ ಕವಿ, ವಿಮರ್ಶಕ ಎಚ್ಚೆಮ್, ಪೆರ್ನಾಲ್ ಸಂಪಾದಕರಾಗಿರುವ ಕಿಟಾಳ್ ( www.kittall.com)  ಸಾಹಿತ್ಯ ಅಂತರ್ಜಾಲ ಪತ್ರಿಕೆ ಯುವ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು, ಅಬುದಾಬಿಯಲ್ಲಿ ನೆಲೆಸಿರುವ ಅನಿವಾಸಿ ಉದ್ಯಮಿ ಶ್ರೀ ಲಿಯೋ ರೊಡ್ರಿಗಸ್ ತಮ್ಮ ಕುಟುಂಬದ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

ಪ್ರಶಸ್ತಿ ರು. 25,000/- ನಗದು ಮತ್ತು ಸನ್ಮಾನ ಪತ್ರವನ್ನು ಒಳಗೊಂಡಿದೆ. ಈ ಹಿಂದೆ ಫಾ| ಜೊ. ಸಿ. ಸಿದ್ದಕಟ್ಟೆ (2012) ವಿಲ್ಮಾ, ಬಂಟ್ವಾಳ್ (2013) ಸ್ಟ್ಯಾನಿ, ಬೇಳಾ (2014) ಮೆಲ್ವಿನ್, ಕೊಳಲ್‍ಗಿರಿ(2015) ವಿಲ್ಸನ್, ಕಟೀಲ್ (2016) ಇವರಿಗೆ ಅನುಕ್ರಮವಾಗಿ ಈ ಪುರಸ್ಕಾರ ಲಭಿಸಿದೆ. 

ಖ್ಯಾತ ಕೊಂಕಣಿ ಕವಿ / ಚಿಂತಕ ಟೈಟಸ್ ನೊರೊನ್ಹಾ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯು ರೋಶು, ಬಜ್ಪೆ ಅವರನ್ನು ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ನವಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ರೋಶು, ಬಜ್ಪೆ ಅವರಿಗೆ ಈ ಪುರಸ್ಕಾರವನ್ನು ಪ್ರಧಾನ ಮಾಡಲಾಗುವುದು. 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ