ಮೈಕ್ ಇಲ್ಲ ಎಂದು ಗ್ಯಾಸ್ ವಿತರಣೆ ಅರ್ಧದಲ್ಲೇ ಬಿಟ್ಟು ನಡೆದ ಕೇಂದ್ರ ಸಚಿವ ಹೆಗಡೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಕಾರ್ಯಕ್ರಮದಲ್ಲಿ ಮೈಕ್ ಇಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತ ಕುಮಾರ ಹೆಗಡೆ ಕೋಪಗೊಂಡು ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ಹೊರನಡೆದ ಘಟನೆ ನಡೆದಿದೆ.  ಇನ್ನು ತಮಗೂ ಕಾರ್ಯಕ್ರಮದಲ್ಲಿ ಗ್ಯಾಸ್ ದೊರೆಯುತ್ತದೆ ಎಂದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದವರಿಗೆ ಗ್ಯಾಸ್ ವಿತರಿಸದ ಕಾರಣ ಫಲಾನುಭವಿಗಳು ಪರಸ್ಪರ ತಾವೇ ಹೊಡೆದಾಡಿಕೊಂಡ ಘಟನೆ ಕೂಡ ಇದೇ ವೇಳೆ ನಡೆದಿದೆ.

ಕಾರವಾರದ ಮೂಡಲಮಕ್ಕಿ ಗ್ರಾಮದಲ್ಲಿ ಮಂಗಳವಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮ ಪ್ರಾರಂಭಕ್ಕಿಂತ ಮೊದಲೇ ಮಳೆಯೂ ಪ್ರಾರಂಭವಾಗಿತ್ತು. ಮಳೆ ಇರುವ ಕಾರಣ ಆಯೋಜಕರು ಭಾಷಣ ಮಾಡಲು ಮೈಕ್ ವ್ಯವಸ್ಥೆಯನ್ನು ಮಾಡಿರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಸಚಿವ ಅನಂತಕುಮಾರ ಹೆಗಡೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ಹೀಗಾಗಿ ಸಚಿವರ ಸಿಟ್ಟಿನಿಂದ ಕಾರ್ಯಕ್ರಮವನ್ನು ಅರ್ದಕ್ಕೇ ಮೊಟಕುಗೊಳಿಸಿಲಾಗಿದೆ. ಈ ವೇಳೆ ಕೇವಲ ನಾಲ್ಕು ಫಲಾನುಭವಿಗಳಿಗೆ ಮಾತ್ರ ಗ್ಯಾಸ್ ಕಿಟ್ ವಿತರಿಸಲಾಗಿತ್ತು. ಆದರೆ ತಮಗೆಲ್ಲರಿಗೂ ಗ್ಯಾಸ್ ಕಿಟ್ ವಿತರಣೆಯಾಗುತ್ತದೆ ಎಂದು ಸರತಿಯಲ್ಲಿ ನಿಂತಿದ್ದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಕೊಡೆ ಹಿಡಿದು ಕೂತಿದ್ದರು. ಆದರೇ ತಮಗಾಗಿ ಮಳೆಯಲ್ಲಿಯೂ ಕುಳಿತ ಜನರ ಬಗ್ಗೆ ತಲೆಕಡಿಸಿಕೊಳ್ಳದ ಸಚಿವರು ಮೈಕ್ ವ್ಯವಸ್ಥೆಯಿಲ್ಲ ಎಂದು ಕೋಪದಿಂದ ಕೇವಲ ನಾಲ್ಕು ಜನರಿಗೆ ಮಾತ್ರ ಗ್ಯಾಸ್ ವಿತರಿಸಿ ಹೊರನಡೆದಿದ್ದರಿಂದ ಅಸಮಧಾನಗೊಂಡ ಯೋಜನೆಯ ಫಲಾನುಭವಿಗಳಿಬ್ಬರು ತಮಗೆ ಸಿಗಲಿಲ್ಲ ಎಂದು ಸಚಿವರ ಎದುರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಬಿಜೆಪಿ ಮುಖಂಡರು ಅವರನ್ನು ಸಮಾಧಾನಪಡಿಸಿದರು.

ತಾನು ರಾಜಕೀಯ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ವಿನಃ ಸಮಾಜ ಸೇವೆ ಮಾಡಲಿಕ್ಕಲ್ಲ ಎಂದು  ಸಚಿವ ಅನಂತ ಕುಮಾರ ಹೆಗಡೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಘಟನೆ ಅವರ ಮಾತಿಗೆ ಇನ್ನೊಂದು ಸಾಕ್ಷಿಯಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ