ರಾಘವೇಂದ್ರ ಗೆದ್ದರೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದು ಖಚಿತ: ಸುಕುಮಾರ ಶೆಟ್ಟಿ ಭವಿಷ್ಯ
ರಾಘವೇಂದ್ರ ಗೆದ್ದರೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದು ಖಚಿತ: ಸುಕುಮಾರ ಶೆಟ್ಟಿ ಭವಿಷ್ಯ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿ. ವೈ ರಾಘವೇಂದ್ರ ಗೆದ್ದರೆ ಅವರ ತಂದೆ ಬಿ. ಎಸ್. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

ಕುಂದಾಪುರದಲ್ಲಿಂದು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ  ಬಿ. ಎಂ. ಸುಕುಮಾರ ಶೆಟ್ಟಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಈ ಹಿಂದೆ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಆ ವೇಳೆಯಲ್ಲಿ 600 ಕೋಟಿಗೂ ಹೆಚ್ಚಿನ ಅನುದಾನವನ್ನು ಕೇವಲ ಬೈಂದೂರು ಕ್ಷೇತ್ರಕ್ಕಾಗಿಯೆ ನೀಡಿದ್ದಾರೆ. ಜನರು ರಾಘವೇಂದ್ರ ಅವರ ಹಿಂದಿನ ಅವಧಿಯಲ್ಲಿ ನಡೆದ ಜನಪರ ಕಾರ್ಯಕ್ರಮಗಳನ್ನು ಮರೆತಿಲ್ಲ. ಬೈಂದೂರಿನ ಜನರು ಈ ಬಾರಿ 50 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ನೀಡಿ ರಾಘವೇಂದ್ರ ಅವರ ಗೆಲುವಿಗೆ ನೆರವಾಗಲಿದ್ದಾರೆ ಎಂದು ಹೇಳಿದ್ದಾರೆ.

4 ವರ್ಷಗಳ ಕಾಲ ಇಲ್ಲಿ ಸಂಸದರಾಗಿ ಕೆಲಸ ಮಾಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬೈಂದೂರು ಕ್ಷೇತ್ರದಲ್ಲಿ ಮೀನುಗಾರಿಕೆ, ನೀರಾವರಿ, ರಸ್ತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಅಪಾರ ಅನುದಾನ ತಂದಿದ್ದಾರೆ. ಈಗ ಅವರು ತೆರವುಗೊಳಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮರುಚುನಾವಣೆ ನಡೆಯಲಿದ್ದು ಅವರ ಪುತ್ರ ರಾಘವೇಂದ್ರ ವಿಜಯ ಗಳಿಸಲಿದ್ದಾರೆ ಎಂದು ಬಿ.ಎಂ.ಎಸ್. ಹೇಳಿದ್ದಾರೆ.

ಶಿವಮೊಗ್ಗ ಲೋಕಸಭೆಗೆ ಸೇರಿದ ಕರಾವಳಿಯ ಏಕೈಕ ವಿಧಾನಸಭಾ ಕ್ಷೇತ್ರವಾಗಿರುವ ಬೈಂದೂರನ್ನು ಶಿವಮೊಗ್ಗ ಲೋಕಸಭಾ ಸದಸ್ಯರು ಸತತವಾಗಿ ನಿರ್ಲಕ್ಷಿಸಿದ್ದಾರೆ ಎಂದು ಪತ್ರಕರ್ತರು ಮಾಡಿದ ಆರೋಪವನ್ನು ಅಲ್ಲಗಳೆದ ಬೈಂದೂರು ಶಾಸಕರು ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ಅವರನ್ನು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಸದಾನಂದ ಉಪ್ಪಿನಕುದ್ರು, ದೀಪಕ್ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ