ಹಾಸನಾಂಬ ದೇವಾಲಯ: ವರ್ಷವಿಡೀ ದೀಪ ಅರುವುದಿಲ್ಲ, ಹೂ ಬಾಡುವುದಿಲ್ಲ ಎನ್ನುವುದು ಕಪೋಲಕಲ್ಪಿತ

ಕರಾವಳಿ ಕರ್ನಾಟಕ ವರದಿ

ಹಾಸನ:
ಇಲ್ಲಿನ ಪ್ರಸಿದ್ಧ ಹಾಸನಾಂಬ ದೇವಾಲಯದ ಬಗ್ಗೆ ಚಾಲ್ತಿಯಲ್ಲಿರುವ ಕೆಲವು ಪವಾಡದ ಸಂಗತಿಗಳು ಕಪೋಲ ಕಲ್ಪಿತ ಎಂದು ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ. ಅವೆಲ್ಲ ಭಕ್ತರ ನಂಬಿಕೆಗೆ ಬಿಟ್ಟ ಸಂಗತಿಗಳು ಎಂದು ಅವರು ಹೇಳಿದ್ದಾರೆ.

ಹಾಸನಾಂಬ ದೇವಾಲಯ ವರ್ಷದ ಕೆಲವೇ ಕೆಲದಿನಗಳಲ್ಲಿ ಮಾತ್ರ ತೆರೆಯುತ್ತದೆ. ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಅಲ್ಲಿ ಉರಿಸಿದ್ದ ದೀಪಗಳು ವರ್ಷಪೂರ್ತಿ ಹಾಗೆಯೆ ಉರಿಯುತ್ತವೆ ಎಂಬ ಮಾತು ಚಾಲ್ತಿಯಲ್ಲಿದೆ. ಮಾತ್ರವಲ್ಲ ಅಲ್ಲಿ ನೈವೇದ್ಯಕ್ಕೆ ಇರಿಸಿದ ಅನ್ನ ಮುಂತಾದ ಪದಾರ್ಥಗಳು ವರ್ಷಪೂರ್ತಿ ಹಾಳಾಗದೆ ಹಾಗೆಯೆ ತಾಜಾ ಇರುತ್ತವೆ ಎಂಬ ನಂಬಿಕೆಯೂ ಇದೆ. ಜೊತೆಗೆ ದೇವರಿಗೆ ಮುಡಿದ ಹೂಗಳು ಸಹ ಬಾಡುವುದಿಲ್ಲ ಎಂದೂ ಹೇಳಲಾಗುತ್ತದೆ.

ಇತ್ತೀಚೆಗೆ ರಾಜ್ಯದ ಪ್ರಗತಿಪರ ಚಿಂತಕರು, ದಲಿತ ಸಂಘಟನೆಗಳು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಸನಾಂಬ ದೇವಾಲಯದ ಕುರಿತು ಇರುವ ಈ ನಂಬಿಕೆಗಳ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದವು. ಇಂಧನ, ಗಾಳಿ ಏನೂ ಇಲ್ಲದೆ ದೀಪ ವರ್ಷಪೂರ್ತಿ ಉರಿಯುವುದು ಅಥವಾ ಅನ್ನ, ಹೂ ಎಲ್ಲ ಒಂದು ವರ್ಷ ಕಾಲ ಹಾಗೆಯೆ ಹಾಳಾಗದೆ ಉಳಿಯುವುದು ನಿಜವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಲಾಗಿತ್ತು.

ಇದೀಗ ಈ ವಿಷಯದ ಕುರಿತು ಮಾತನಾಡಿರುವ ಹಾಸನಾಂಬ ದೇವಸ್ಥಾನದ ಪ್ರಧಾನ ಅರ್ಚಕರು ದೇವಸ್ಥಾನದ ಬಾಗಿಲು ಮುಚ್ಚಿದ ಬಳಿಕ ವರ್ಷಪೂರ್ತಿ ದೀಪಗಳು ಉರಿಯುತ್ತಿರುತ್ತವೆ ಅಥವಾ ಹೂ ಬಾಡುವುದಿಲ್ಲ, ಅನ್ನ ಹಾಳಾಗುವುದಿಲ್ಲ ಎಂದು ದೇವಾಲಯದ ಯಾರೂ ಕೂಡ ಎಂದೂ ಹೇಳಿಲ್ಲ. ಅದೆಲ್ಲ ಭಕ್ತಾದಿಗಳ ನಂಬಿಕೆ, ಅವರ ಕಣ್ಣಿಗೆ ಏನು ಕಾಣುತ್ತದೆ ಅದು ಅವರ ಭಕ್ತಿಗೆ ಬಿಟ್ಟ ವಿಚಾರ. ಆದರೆ ನಾವಂತೂ ಹಾಗೆ ಎಂದೂ ಹೇಳಿಲ್ಲ ಎಂದು ಹೇಳಿದ್ದಾರೆ.

ಹಾಸನದ ಹಾಸನಾಂಬೆಯ ದೇವಿ ದರ್ಶನ ಸಿಗುವುದು ವರ್ಷಕ್ಕೆ ಕೇವಲ 10-13 ದಿನಗಳು ಮಾತ್ರ. ಪ್ರತಿವರ್ಷ ಅಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಾಲಯ ಬಾಗಿಲು ತೆರೆದರೆ ಆನಂತರ ದೀಪಾವಳಿಯ ಬಲಿಪಾಡ್ಯಮಿಯಂದು ಮೂರನೇ ದಿನ ಬಾಗಿಲು ಮುಚ್ಚಲಾಗುವುದು. ಈ ಸಮಯದಲ್ಲಿ ಮಾತ್ರ ಭಕ್ತರು ದೇವಿಯ ದರ್ಶನ ಮಾಡಬಹುದು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ