ಸೌದಿಯಲ್ಲಿ ಶಿರ್ವ ನರ್ಸ್ ಸಾವು: ಪೋಸ್ಟ್ ಮಾರ್ಟಂ ನಡೆದಿಲ್ಲ ಎಂಬ ಶಂಕೆ

ಕರಾವಳಿ ಕರ್ನಾಟಕ ವರದಿ

ಉಡುಪಿ
: ಸೌದಿಯಲ್ಲಿ ನಿಗೂಢ ಸಾವಪ್ಪಿದ ಶಿರ್ವ ಸಮೀಪದ ಕುತ್ಯಾರು ನಿವಾಸಿ ಹೆಝಲ್ ಜ್ಯೋತ್ನ್ಸಾ ಮಥಾಯಸ್ ಅವರ ಪೋಸ್ಟ್ ಮಾರ್ಟಂ ವರದಿಯೇ ಇಲ್ಲದೇ ಅವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಸೌದಿಯಲ್ಲಿ ನಿರ್ಧರಿಸಿರುವುದು ಕುಟುಂಬದವರಿಗೆ ಪೋಸ್ಟ್ ಮಾರ್ಟಂ ನಡೆದಿರುವ ಬಗ್ಗೆಯೇ ಸಂಶಯ ಮೂಡಿದೆ ಎಂದು ಮಾನವಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಅವರು ಹೇಳಿದ್ದಾರೆ.

ಸೌದಿಯ ಅಲ್ ಬಹಾ ಫೋರೆನ್ಸಿಕ್ ಮೆಡಿಸಿನ್ ಸೆಂಟರ್ ವೈದ್ಯ ಬಂದರ್ ಸಲಾಹಿ ಅಲ್ ಝರಾನಿ ಅವರು ಸಹಿ ಮಾಡಿದ ಡೆತ್ ನೋಟಿಫಿಕೇಶನ್ ನಲ್ಲಿ ಹೆಝಲ್ ಸಾವಿಗೆ ನೇಣು ಬಿಗಿದು ಉಸಿರು ಕಟ್ಟಿರುವುದು ಕಾರಣ ಎಂದು ತಿಳಿಸಲಾಗಿದ್ದು, ಅದರಂತೆ ಅಲ್ಲಿನ ವೈದ್ಯರು ಆತ್ಮಹತ್ಯೆ ಎಂದು ನಿರ್ಧರಿಸಿದ್ದಾರೆ. ಸಾವಿನ ಕಾರಣದ ಖಚಿತತೆ ನಿರ್ಧರಿಸಲು ಅಲ್ಲಿನ ಪೋಸ್ಟ್ ಮಾರ್ಟಂ ವರದಿ, ಮಹಜರು ವರದಿ, ಹೆಝಲ್ ಅವರು ಬರೆದಿರುವರೆನ್ನಲಾದ ಡೆತ್ ನೋಟ್, ಪೊಲೀಸ್ ಚಾರ್ಜ್ಶೀಟ್ ಮುಂತಾದವುಗಳು ಅತ್ಯಗತ್ಯ. ಆದರೆ ಆಕೆಯ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂಬ ಅಲ್ಲಿನ ವೈದ್ಯರೊಬ್ಬರ ವರದಿ ಮತ್ತು ಅದಕ್ಕೆ ತಕ್ಕಂತೆ ಪೊಲೀಸರು ಆಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ ಎಂದು ನೀಡಿದ ವರದಿಯನ್ನಷ್ಟೇ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಕಳಿಸಿಕೊಟ್ಟಿದೆ. ಹೆಝಲ್ ಅವರ ನಿಗೂಢ ಸಾವಿನ ಬಗ್ಗೆ ಯಾವುದೇ ಪ್ರಮುಖ ದಾಖಲೆ ಕಳಿಸದೇ ಜಿದ್ದಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರ ಹಕ್ಕು ರಕ್ಷಿಸಬೇಕಾದ ಕರ್ತವ್ಯದಲ್ಲಿ ವಿಫಲವಾಗಿದೆ. ಈ ಬಗ್ಗೆ ಅದು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ ಎಂದು ಡಾ. ರವೀಂದ್ರನಾಥ ಶಾನುಭಾಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಝಲ್ ಅವರ ದೇಹದಲ್ಲಿ ಹಿಂಸೆ ನೀಡಿದ ಅಥವಾ ಆಕೆ ಹೋರಾಡಿದ ಯಾವುದೇ ಸಂಕೇತಗಳಿಲ್ಲ ಎಂದು ಸೌದಿಯ ಅಲ್ ಬಹಾ ಜಿಲ್ಲಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಲಿ ಬಿನ್ ಮೊಹ್ಮದ್ ಅಲ್ ಹಾದಿ ಅವರು ಆತ್ಮಹತ್ಯೆ ಎಂದು ನಿರ್ಧರಿಸಿದ್ದಾರೆ. ಜಗತ್ತಿನ ಯಾವುದೇ ಪೊಲೀಸ್ ವ್ಯವಸ್ಥೆ ಈ ರೀತಿ ಆತ್ಮಹತ್ಯೆ ಎಂದು ಘೋಷಿಸಿದ ಉದಾಹರಣೆ ಇರಲಿಕ್ಕಿಲ್ಲ ಎಂದು ಡಾ. ಶಾನುಭಾಗ್ ವ್ಯಂಗ್ಯವಾಡಿದ್ದಾರೆ.

ಹೆಝಲ್ ಡೆತ್ ನೋಟ್ ಪ್ರಸ್ತಾಪಿಸಿದ ಆರೋಪಿ ಬಿಡುಗಡೆ
ಹೆಝಲ್ ಅವರ ಕುಟುಂಬ ಸದಸ್ಯರು, ಹೆತ್ತವರು ಹೆಝಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೆ ಅಥವಾ ಆಕೆಯ ಸಾವಿನಲ್ಲಿ ಬೇರೆ ಕಾರಣಗಳಿವೆಯೇ ಎಂಬುದೇ ಅರಿಯದೇ ನ್ಯಾಯಕ್ಕಾಗಿ ಹೋರಾಡಬೇಕೆ ಅಥವಾ ಬೇಡವೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂಥ ದುರ್ಬಲ ಮನಸ್ಥಿತಿಯವಳಲ್ಲ ಎಂಬುದು ಅವರ ತಂದೆ ರಾಬರ್ಟ್ ಅವರ ಖಚಿತ ನಿಲುವಾಗಿದೆ. ಸಹೋದರ ರಾಯನ್ ಅವರ ನಿಲುವು ಕೂಡ ಇದೇ ಆಗಿದೆ. ಹೆಝಲ್ ಅವರು ಇಂಗ್ಲೀಷ್ ಹಾಗೂ ಕನ್ನಡ(ಕೊಂಕಣಿ) ಲಿಪಿಯಲ್ಲಿ ಬರೆದ ಡೆತ್ ನೋಟ್ ನಲ್ಲಿ ಆಸ್ಪತ್ರೆ ಸಿಬಂದಿ ಇಬ್ರಾಹಿಂ ಅಲ್ ಝರಾನಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಬರೆದಿದ್ದಾರೆ ಎನ್ನಲಾಗಿದೆ. ಇಬ್ರಾಹಿಂನನ್ನು ಬಂಧಿಸಿದ್ದ ಸೌದಿ ಪೊಲೀಸರು ಮೂರು ದಿನಗಳ ಹಿಂದೆ ಆತನನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಶಾನುಭಾಗ್ ತಿಳಿಸಿದರು.

ಸಾವಿನ ನಿಗೂಢತೆ ಬೇಧಿಸಲು ಮರು ಪೋಸ್ಟ್ ಮಾರ್ಟಂ ಸಾಧ್ಯತೆ
ಹೆಝಲ್ ಅವರ ಸಾವಿನ ನಿಗೂಢತೆ ಬೇಧಿಸಲು ಇಲ್ಲಿ ದಫನ ಮಾಡಲಾಗಿರುವ ಅವರ ಮೃತದೇಹವನ್ನು ಹೊರತೆಗೆದು ಮತ್ತೆ ಪೋಸ್ಟ್ ಮಾರ್ಟಂ ಮಾಡುವ ಅವಕಾಶವಿದೆ. ಅದಕ್ಕೆ ಅವರ ಕುಟುಂಬದ ಅನುಮತಿ ಬೇಕಿದೆ. ಹೆಝಲ್ ಅವರ ಸಂಪ್ರದಾಯಸ್ತ ಹೆತ್ತವರು ಈ ಬಗ್ಗೆ ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ. ಇನ್ನೂ ಒಂದು ವಾರ ಸೌದಿಯ ಪೊಲೀಸರು, ಆಸ್ಪತ್ರೆ ಮತ್ತು ಅಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ತಾವು ಕೇಳಿರುವ ದಾಖಲೆಗಳಿಗಾಗಿ ಕಾಯಲು ನಿರ್ಧರಿಸಿದ್ದು, ಆ ಬಳಿಕ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಡಾ. ಶಾನುಭಾಗ್ ಅವರು ಮರು ಪೋಸ್ಟ್ ಮಾರ್ಟಂ ಸಾಧ್ಯತೆಯ ಸುಳಿವು ನೀಡಿದರು.

ಹೆಝಲ್ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು, ಪರಿಹಾರ ಮೊತ್ತ ತಲುಪಿಸುವಂತೆ ಪತ್ರ ಬರೆಯಲಾಗಿದ್ದು, ಹೆಝಲ್ ಕುಟುಂಬಕ್ಕೆ ನೈತಿಕ ಮತ್ತು ಕಾನೂನಾತ್ಮಕ ರೀತಿಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಡಾ. ಶಾನುಭಾಗ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ತಮ್ಮ ಸಹೋದರಿಯ ನಿಗೂಢ ಸಾವು ಪ್ರಕರಣದಲ್ಲಿ ಜಿದ್ದಾದಲ್ಲಿನ ಭಾರತೀಯ ರಾಯಭಾರ ಕಛೇರಿ ಒಮ್ಮೆ ಸಹ ನಮ್ಮ ಕುಟುಂಬವನ್ನು ಸಂಪರ್ಕಿಸಿಲ್ಲ. ನಾವಾಗಿಯೇ ಸಂಪರ್ಕಿಸಿದರೂ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ ಎಂದು ಹೆಝಲ್ ಸಹೋದರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೆಝಲ್ ಅವರ ತಂದೆ ರಾಬರ್ಟ್ ಕ್ವಾಡ್ರಸ್, ತಾಯಿ ಹೆಲೆನ್ ಕ್ವಾಡ್ರಸ್,ದು:ಖತಪ್ತ ಪತಿ ಅಶ್ವಿನ್ ಮಥಾಯಸ್, ಹೆಝಲ್ ಸಹೋದರ ರಾಯನ್ ಮೆರ್ವಿನ್ ಕ್ವಾಡ್ರಸ್ ಉಪಸ್ಥಿತರಿದ್ದರು.
ಹೆಝಲ್ ಅವರ ಪತಿಗೆ ಕರೆ ಮಾಡಿದ ಬೆಂಗಳೂರು ಎನ್.ಆರ್,ಐ ಫೋರಂ ಒಂದು ಲಕ್ಷ ರೂ. ನೆರವು ನೀಡುವುದಾಗಿ ಹೇಳಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ