ಓಮನ್‌ನಲ್ಲಿ ಉತ್ತರ ಕನ್ನಡದ ಮೀನುಗಾರರ ಬಂಧನ: ಸುಷ್ಮಾ ಸ್ವರಾಜ್ ದಯವಿಟ್ಟು ಇತ್ತ ಗಮನ ಹರಿಸಿ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಭಟ್ಕಳ:
ಕಳೆದ ಎರಡು ತಿಂಗಳುಗಳ ಹಿಂದೆ ಅರಬ್ ದೇಶ ದುಬೈನಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತಾಲೂಕುಗಳ 15 ಮೀನುಗಾರರನ್ನು ಓಮನ್ ಪೊಲೀಸರು ಸಿನಾವ್ ಎಂಬಲ್ಲಿ ಬಂಧಿಸಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಭಟ್ಕಳ ತಾಲೂಕಿನ ಮುರ್ಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಬಾಪು, ನಯೀಮ್ ಭಾಂಡಿ, ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಇಸಾಖ್, ಅಬ್ದುಲ್ ಹುಸೇನ್, ಮುಹಮ್ಮದ್ ಬಾಪು, ಅಬ್ದುಲ್ಲಾ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಧಾರು, ಯಾಖೂಬ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಶಮನಿವರೇ ಬಂಧಿತ ಮೀನುಗಾರರು ಎಂಬ ಮಾಹಿತಿ ದೊರೆತಿದೆ.

ಬಂಧಿಸಿದ್ದೇಕೆ?
ಕಳೆದ ಎರಡು ತಿಂಗಳ ಹಿಂದೆ ಅಂದರೆ ಮೀನುಗಾರಿಕೆಯ ಮೇಲೆ ನಿರ್ಬಂಧ ಹೇರಿದ್ದ ಸಮಯದಲ್ಲಿಯೇ ದುಬೈನಿಂದ ಸುಮಾರು 17ಕ್ಕೂ ಹೆಚ್ಚು ಮೀನುಗಾರರು ಎರಡು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಓಮನ್ ನ ಸಿನಾವ್ ಕಡಲಿನಲ್ಲಿ ಮೀನುಗಾರಿಕೆ ನಡೆಸಿ ಸುಮಾರು 800 ಕೆ.ಜಿ. ಕಿಂಗ್ ಫಿಶ್ ಬೇಟೆಯಾಡಿದ್ದರು.

ಆ ಸಂದರ್ಭದಲ್ಲಿ ಓಮನ್ ಪೊಲೀಸರು ಹಾಗೂ ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆಯೂ ಸಮುದ್ರ ಮಧ್ಯದಲ್ಲೆ ನಿರ್ಬಂಧವನ್ನು ಹೇರಿದ್ದಾರೆ. ಅದರಲ್ಲಿ 15 ಮಂದಿ ಜಿಲ್ಲೆಯ ಮೀನುಗಾರರು ಸೇರಿದ್ದಾರೆ ಎನ್ನಲಾಗಿದೆ.

ತಂಝೀಮ್ ಸಂಸ್ಥೆಯಿಂದ ಸುಷ್ಮಾ ಸ್ವರಾಜ್‌ಗೆ ಮನವಿ:
ಜಿಲ್ಲೆಯ ಬಂಧನಕ್ಕೊಳಗಾದವರ ಕುಟುಂಬದವರು ಬಂಧಿತರನ್ನು ಬಿಡಿಸಿಕೊಂಡು ಭಾರತಕ್ಕೆ ಮರಳಿಸುವ ವ್ಯವಸ್ಥೆ ಮಾಡಬೇಕೆಂದು ತಂಝೀಮ್ ಸಂಸ್ಥೆಗೆ ಮಾನವಿ ಮಾಡಿದ್ದಾರೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ್- ವ- ತಂಝೀಮ್‌ನ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಓಮನ್ ಪೋಲಿಸರು ಬಂಧಿತರನ್ನು ಬಿಡುತ್ತೇವೆ ಎಂದು ಹೇಳಿ ತಿಂಗಳುಗಳು ಕಳೆದರೂ ಇದುವರೆಗೂ ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮ ಕ್ರಮ ಕೈಗೊಂಡು ಅವರನ್ನು ಮರಳಿ ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡುತ್ತೇವೆ. ಭಟ್ಕಳ ಉಪವಿಭಾಗಾಧಿಕಾರಿ ಮೂಲಕ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಇನಾಯತ್ ಉಲ್ಲಾ ಶಾಬಂದ್ರಿ ತಿಳಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ