ಮಿಲಾಗ್ರಿಸ್ ಪ್ರಾಂಶುಪಾಲರಿಗೆ ಹಲ್ಲೆ ಪ್ರಕರಣ: ವಿದ್ಯಾರ್ಥಿ ‘ಅಪರಾಧಿ’
ಮಿಲಾಗ್ರಿಸ್ ಪ್ರಾಂಶುಪಾಲರಿಗೆ ಹಲ್ಲೆ ಪ್ರಕರಣ: ವಿದ್ಯಾರ್ಥಿ ‘ಅಪರಾಧಿ’

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾ. ಮೈಕೆಲ್  ಅವರಿಗೆ ಎರಡು ವರ್ಷಗಳ ಹಿಂದೆ ಹಲ್ಲೆಗೈದ ಪ್ರಕರಣದ ಆರೋಪಿ, ಬಿಬಿಎ ವಿದ್ಯಾರ್ಥಿಯಾಗಿದ್ದ ಮೊಹ್ಮದ್ ಶಹ್ನವಾಝ್ ಮೇಲಿದ್ದ ಆರೋಪ ಮಂಗಳೂರು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಮೂರನೇ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದ ಇಪ್ಪತ್ತೆರಡರ ಹರಯದ ಮೊಹ್ಮದ್ ಶಾ ನವಾಝ್ ಅಪರಾಧಿಯಾಗಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ಅವರು ತೀರ್ಪು ನೀಡಿದ್ದಾರೆ.

ಅಪರಾಧಿಯ ಭವಿಷ್ಯ ಪರಿಗಣಿಸಿ ಸನ್ನಡತೆ ಆಧಾರದಲ್ಲಿ ಶಿಕ್ಷೆ ಬಗ್ಗೆ ಅ.22ರಂದು ತೀರ್ಪು ಪ್ರಕಟವಾಗಲಿದೆ. ಅಪರಾಧಿಯ ಮನೆ ಪರಿಸರ ಆತನ ಹಿನ್ನೆಲೆ ಇತರ ವಿಷಯಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರು ಪರಿವೀಕ್ಷಣಾಧಿಕಾರಿಯನ್ನು ನೇಮಿಸಿದ್ದಾರೆ. ಸನ್ನಡತೆ ಆಧಾರದಲ್ಲಿ ಶಿಕ್ಷೆಯಾಗದಿದ್ದರೆ ಬಾಂಡ್ ಪಡೆದು ಒಂದು ವರ್ಷ ಕಾಲ ನಿಗಾ ಇಡಲಾಗುತ್ತದೆ. ಈತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಮಾತ್ರ ಸಾಬೀತಾಗಿದೆ ಎಂದು ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ತಿಳಿಸಿದ್ದಾರೆ.

ವಿದ್ಯಾರ್ಥಿಯನ್ನು ಘಟನೆ ನಡೆದ ಸಂದರ್ಭ ಬಂಧಿಸಲೇಬೇಕೆಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿ’ಸೋಜಾ ಮುಂತಾದವರು ಆಗ್ರಹಿಸಿದ್ದರು.

 ಹಾಜರಾತಿ ಕೊರತೆಯ ಕಾರಣಕ್ಕೆ ಹಾಲ್ ಟಿಕೆಟ್ ನಿರಾಕರಿಸಿದಾಗ ಕುಪಿತಗೊಂಡ ವಿದ್ಯಾರ್ಥಿ ಶಾ ನವಾಝ್ ಪ್ರಾಂಶುಪಾಲರು ಊಟಕ್ಕೆ ಹೋಗುತ್ತಿದ್ದ ಸಂದರ್ಭ ಅವರನ್ನು ಹಿಂಬಾಲಿಸಿ ಪುಸ್ತಕದಿಂದ ಕಿವಿ ಹಾಗೂ ತಲೆಯ ಹಿಂಭಾಗಕ್ಕೆ ಹಲ್ಲೆಗೈದಿದ್ದ. ಬಂದರು ಠಾಣೆಯಲ್ಲಿ ಈ ಬಗ್ಗೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪಿ.ಎಸ್ಸೈ ಮದನ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಸರಕಾರದ ಪರ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

►►ಇದನ್ನೂ ಓದಿ: ಹಾಜರಾತಿ ಕೊರತೆ: ಹೈಕೋರ್ಟ್ನಿಂದ ಅರ್ಜಿ ವಜಾ
ಹಾಜರಿ ಕೊರತೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಲ್ ಟಿಕೇಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಇಪ್ಪತ್ತೆರಡು ವಿದ್ಯಾರ್ಥಿಗಳು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪೋಷಕರೊಂದಿಗೆ ಕಾಲೇಜಿನ ಎದುರು ಪ್ರತಿಭಟಿಸಿದ್ದರು. ಈ ಪೈಕಿ 17 ಮಂದಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಕಾಲೇಜು ಆಡಳಿತದ ನಿರ್ಧಾರವನ್ನು ಪ್ರಶ್ನಿಸಿದ್ದರು.

ವಿದ್ಯಾರ್ಥಿಗಳು ತಾವು ಎಲ್ಲ ತರಗತಿಗಳಿಗೂ ಹಾಜರಾಗಿದ್ದು ಹಾಜರಾತಿ ಕಡಿಮೆಯಾಗುವ ಪ್ರಶ್ನೆಯೆ ಇಲ್ಲ. ಎಲ್ಲರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದು ಬಡಕುಟುಂಬಗಳಿಂದ ಬಂದವರಾಗಿದ್ದಾರೆ. ಹಾಜರಾತಿ ಕಡಿಮೆ ಆದ ವಿಷಯದ ಕುರಿತು ತಮಗೆ ಯಾವುದೇ ಮಾಹಿತಿ ನೀಡದೆ ಅಕ್ಟೋಬರ್ 24ರಂದು ಹಾಲ್ ಟಿಕೆಟ್ ತೆಗೆದುಕೊಳ್ಳುವ ಸಲುವಾಗಿ ಹೆತ್ತವರು ಬಂದಾಗಲೆ ಈ ವಿಷಯ ತಿಳಿದಿದ್ದು ಅಲ್ಲಿಯ ತನಕ ನಮಗೆ ಏನೂ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದರು.

ಆದರೆ ಈ ವಾದವನ್ನು ತಳ್ಳಿ ಹಾಕಿದ ಮಿಲಾಗ್ರಿಸ್ ಕಾಲೇಜು ಪರ ವಕೀಲರು ಹಾಜರಾತಿ ಕಡಿಮೆ ಆದ ಕುರಿತು ಮನೆಗೆ ಮಾಹಿತಿ ನೀಡಿದ ದಾಖಲೆಗಳನ್ನು ಪ್ರಸ್ತುತಪಡಿಸಿದರು. ಹಾಜರಾತಿ ಕಡಿಮೆ ಇದ್ದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ ಹಾಜರಾತಿ ಕೊರತೆ ತುಂಬಿಸುವ ಪ್ರಯತ್ನವನ್ನೂ ಕಾಲೇಜು ಆಡಳಿತವು ಮಾಡಿದೆ. ಆ ತರಗತಿಗಳ ಪ್ರಯೋಜನವನ್ನು 66 ವಿದ್ಯಾರ್ಥಿಗಳು ಪಡೆದಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ಒಂದು ಗಂಭೀರ ವಿಷಯವಾಗಿ ಕಾಣಲೆ ಇಲ್ಲ. ಹೀಗಾಗಿ ಅವರು ಹಾಜರಾತಿ ಕೊರತೆ ಎದುರಿಸುವಂತಾಗಿದೆ ಎಂದು ವಾದ ಮಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು ಹಾಲ್ ಟಿಕೆಟ್ ನೀಡಲು ಕಾಲೇಜಿಗೆ ಆದೇಶ ನೀಡುವಂತೆ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾಜರಾತಿ ಕೊರತೆ ವಿಷಯಕ್ಕೆ ಸಂಬಂಧಿಸಿ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಾನವಾಝ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಗಂಭೀರ ಹಲ್ಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಇನ್ಸ್ಪೆಕ್ಟರ್ ಶಾಂತಾರಾಂ ಅವರು ಪಾಂಡೇಶ್ವರ ನಿವಾಸಿ ವಿದ್ಯಾರ್ಥಿ ಶಹ್ನವಾಝ್ ನನ್ನು ಪಂಪ್ವೆಲ್ ಬಳಿ ಬಂಧಿಸಿ ನ್ಯಾಯಾಧೀಶರೆದುರು ಹಾಜರುಪಡಿಸಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ