ವಿವಾದಾತ್ಮಕ ಕಸಾಯಿಖಾನೆಗೆ ವಿವೇಚನೆ ಇಲ್ಲದೆ ಅನುದಾನ ಸಲಹೆ ಮಾಡಿದ ಸಚಿವ ಖಾದರ್!

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ನಗರದದಲ್ಲಿ ಜನಜೀವನದ ಸುಧಾರಣೆಗಾಗಿ ಆಗಬೇಕಾದ ಯೋಜನೆಳಿಗೆ ಆದ್ಯತೆ ನೀಡಬೇಕಾಗಿದ್ದ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅದನ್ನು ಮರೆತು ಕಸಾಯಿಖಾನೆಯ ಆಧುನೀಕರಣದ ಚಿಂತೆಯಲ್ಲಿ ಮುಳುಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರಕ್ಕೆ ಹರಿದು ಬರಲಿರುವ ಕೇಂದ್ರ ಸರ್ಕಾರದ ಅನುದಾನದಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ಕಸಾಯಿಖಾನೆಯ ಆಧುನೀಕರಣಕ್ಕೆ ಮೀಸಲಾಗಿಡಬೇಕು ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಯು.ಟಿ.ಖಾದರ್ ಸಲಹೆ ಮಾಡಿದ್ದು ಮಂಗಳೂರು ನಗರದ ಜನರ ಹುಬ್ಬೇರುವಂತೆ ಮಾಡಿಸಿದೆ.

ನಗರದ ನಡುಭಾಗದಲ್ಲಿರುವ ಕುದ್ರೋಳಿ ಕಸಾಯಿಖಾನೆ ಮಂಗಳೂರು ಮಹನಾಗರ ಪಾಲಿಕೆಯ (ಮನಪಾ) ಅಧೀನಕ್ಕೆ ಒಳಪಟ್ಟ ನಗರದ ಅಧಿಕೃತ ಕಸಾಯಿಖಾನೆ. ಆದರೆ ಈ ಕಸಾಯಿಖಾನೆ ಇತ್ತೀಚೆಗೆ ಹಲವಾರು ಕಾರಣಗಳಿಂದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕದ್ದುತಂದ ಜಾನುವಾರುಗಳನ್ನು, ಅಕ್ರಮವಾಗಿ ಸಾಗಿಸಿದ ಜಾನುವಾರುಗಳನ್ನು ಇಲ್ಲಿ ವಧೆ ಮಾಡಲಾಗುತ್ತಿದೆ ಎನ್ನುವ ಆರೋಪ ಹಲವು ಬಾರಿ ಕೇಳಿಬಂದಿದೆ. ಆದರೆ ಇದಕ್ಕಿಂತ ಮುಖ್ಯವಾಗಿ ಕುದ್ರೋಳಿಯ ಈ ಜಾನುವಾರು ವಧಾಗೃಹವನ್ನು ಇಲ್ಲಿಂದ ಸ್ಥಳಾಂತರಿಸಬೇಕು ಎಂದು ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯೂ ಶಿಫಾರಸು ಮಾಡಿತ್ತು. ಆದರೆ ಮನಪಾ ಈ ಕಸಾಯಿಖಾನೆಯನ್ನು ಸ್ಥಳಾಂತರಿಸಲು ವಿಫಲವಾಗಿತ್ತು.

ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಣ್ಣೂರು ಪರಿಸರದ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಆ ತೀರ್ಮಾನ ಕೈಬಿಡಲಾಗಿತ್ತು. ಬಳಿಕ ಹೊರವಲಯದಲ್ಲೆ ಇರುವ ಕಡುಪು ಎಂಬಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣದ ಪ್ರಸ್ತಾವನೆ ಬಂತು. ಆದರೆ ಕುಡುಪು ಪರಿಸರದಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿತ್ತು.

ಕುಡುಪು ಪರಿಸರದಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದ ಕಸಾಯಿಖಾನೆ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ವಿಮಾನ ಹಾರಾಟಕ್ಕೆ ಪಕ್ಷಿಗಳು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಮಾನಗಳ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ವಿಮಾನ ನಿಲ್ದಾಣ ಪ್ರಾಧಿಕಾರ ಕಸಾಯಿಖಾನೆ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತ್ತು.

ಮೇಲಿನ ಎಲ್ಲ ಕಾರಣಗಳಿಂದ ಕುದ್ರೋಳಿಯ ಕಸಾಯಿಖಾನೆ ಎಲ್ಲಿಗೂ ಸ್ಥಳಾಂತರಗೊಳ್ಳದೆ ಹಾಗೆಯೆ ಉಳಿದಿಕೊಂಡಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದೇ ಕಸಾಯಿಖಾನೆಯನ್ನು ಅತ್ಯಾಧುನಿಕಗೊಳಿಸಲು ಸಚಿವ ಯು.ಟಿ.ಖಾದರ್ 15 ಕೋಟಿ ಅನುದಾನಕ್ಕೆ ಸಲಹೆ ಮಾಡಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಕನಿಷ್ಟ 3 ಎಕರೆ ವಿಶಾಲವಾದ ಜಾಗಬೇಕು. ಸುಸಜ್ಜಿತ ಕಟ್ಟಡ, ವಧಾಗೃಹ, ಪ್ರಾಣಿಗಳನ್ನು ಕಟ್ಟಿ ಹಾಕುವ ಜಾಗ. ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಎಲ್ಲವೂ ಇರಬೇಕು. ಆದರೆ ಕುದ್ರೋಳಿಯಲ್ಲಿ ಸದ್ಯಕ್ಕೆ ಇರುವ ವಧಾಗೃಹ ಕೇವಲ 70 ಸೆಂಟ್ಸ್ ಜಾಗದಲ್ಲಿ ಇದೆ. ಈ ಜಾಗ ಅತ್ಯಾಧುನಿಕ ವಧಾಗೃಹ ನಿರ್ಮಿಸಲು ಸೂಕ್ತವೇ ಅಲ್ಲ. ಆದರೂ ಯು. ಟಿ. ಖಾದರ್ ಇಲ್ಲಿಯೆ ಅತ್ಯಾಧುನಿಕ ವಧಾಗೃಹ ನಿರ್ಮಾಣಕ್ಕೆ 15 ಕೋಟಿ ರೂಪಾಯಿಗಳ ಶಿಫಾರಸು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಮಂಗಳೂರಿನ ಇಬ್ಬರು ಬಿಜೆಪಿ ಶಾಸಕರು, ಆರೆಸ್ಸೆಸ್ ಪರಿವಾರದ ಸಂಘಟನೆಗಳು ಖಾದರ್ ಅವರ ಈ ನಿರ್ಧಾರದ ವಿರುದ್ಧ ಈಗಾಗಲೇ ಅಪಸ್ವರ ಎತ್ತಿದ್ದಾರೆ. ಬೃಹತ್ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ಖಾದರ್ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮಗಳಲ್ಲೂ, ಸೋಷಿಯಲ್ ಮೀಡಿಯಾದಲ್ಲೂ ಖಾದರ್ ಅವರ ನಿರ್ಣಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಆದರೆ ಖಾದರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಾ ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡುವತೆ ಸಲಹೆ ಮಾಡಿದ್ದು ಮಾತ್ರ ನಾನು, ಅದನ್ನು ಕೊಡಬಾರದು ಎಂದಿದ್ದರೆ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಈ ತೀರ್ಮಾನ ಕೈಗೊಳ್ಳೂವಾಗ ಮನಪಾದಲ್ಲಿ ವಿರೋಧ ಪಕ್ಷದ ನಾಯಕರೂ ಇದ್ದರು, ಆಗ ಬರದ ಆಕ್ಷೇಪ ಈಗೇಕೆ ಎಂದು ಖಾದರ್ ಪ್ರಶ್ನಿಸಿದ್ದಾರೆ.

ಬಿಜೆಪಿಯ ದ್ವಂದ್ವ ಎಂದರೆ ತಾನು ಮನಪಾದಲ್ಲಿ ಆಡಳಿತ ನಡೆಸುತ್ತಿದ್ದಾಗ ಕಸಾಯಿಖಾನೆಯ ಉಸ್ತುವಾರಿಯನ್ನು ಬಜರಂಗದಳಕ್ಕೆ ವಹಿಸಿಕೊಟ್ಟಿತ್ತು. ಮಾತೆತ್ತಿದರೆ ಗೋರಕ್ಷಣೆ, ಗೋ ಹತ್ಯೆಗೆ ವಿರೋಧ ಎಂದು ಭಾಷಣ ಮಾಡುವ, ಹೋರಾಟ ಮಾಡುವ ಬಜರಂಗದಳ ಸ್ವತಃ ಕಸಾಯಿಖಾನೆಯ ಉಸ್ತುವಾರಿಯನ್ನು ಹೊತ್ತುಕೊಂಡಿದ್ದು ಮಾತ್ರ ಬಿಜೆಪಿ ಮತ್ತು ಸಂಘಪರಿವಾರದ ದ್ವಂದ್ವ ನಿಲುವಿಗೆ ಸಾಕ್ಷಿ.

ಸಚಿವ ಖಾದರ್ ಹೇಳುವ ಹಾಗೆ ಬಿಜೆಪಿ ಕೂಡ ಮನಪಾದಲ್ಲಿ ಅಧಿಕಾರದಲ್ಲಿದ್ದಾಗ ಕಸಾಯಿಖಾನೆಯನ್ನು ಆಧುನಿಕಗೊಳಿಸಲು ಯೋಚಿಸಿತ್ತು. ಅದಕ್ಕಾಗಿ ಬೇಡಿಕೆಯೂ ಬಂದಿತ್ತು. ಈಗ ಕಸಾಯಿಖಾನೆಯನ್ನು ಆಧುನೀಕರಣಗೊಳಿಸುವ ಪ್ರಸ್ತಾಪ ಬಂದಾಗ ಮಾತ್ರ ಅದು ರಾಜಕೀಯಮಾಡುತ್ತಿದೆ ಎಂದು ಖಾದರ್ ಆರೋಪಿಸುತ್ತಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಗಳಗಳೇನೆ ಇದ್ದರೂ ಮಂಗಳೂರಿನಂತಹ ಒಂದು ಸಣ್ಣ ನಗರದಲ್ಲಿ ಜನರ ಬದುಕಿನ ಸುಧಾರಣೆಗೆ ಅಗತ್ಯವಿರುವ ಆದ್ಯತೆಯ ವಿಷಯಗಳು, ಸಮಸ್ಯೆಗಳು, ಬೇಡಿಕೆಗಳು ನೂರಾರು ಇರುವಾಗ ಕಸಾಯಿಖಾನೆಯ ಆಧುನೀಕರಣಕ್ಕಾಗಿ 15 ಕೋಟಿಯಷ್ಟು ದೊಡ್ಡ ಮೊತ್ತವನ್ನು ವಿನಿಯೋಗ ಮಾಡುವ ಅಗತ್ಯವಿದೆಯೆ ಎಂಬುದು ಮಂಗಳೂರಿನ ನಾಗರಿಕರ ಪ್ರಶ್ನೆಯಾಗಿದೆ.

ಮಂಗಳೂರಿನಲ್ಲಿ ಕೋಳಿ ಮಾಂಸ ಮತ್ತು ಕುರಿಮಾಂಸವನ್ನು ಅತ್ಯಾಧುನಿಕವಾಗಿ ಸಂಸ್ಕರಿಸಿ ಉತ್ತಮ ಗುಣಮಟ್ಟದಲ್ಲಿ ನೀಡುವ ಹಲವು ಉದ್ಯಮಗಳು ಖಾಸಗಿಯಾಗಿ ಇವೆ. ಅದೆಲ್ಲ ಇರುವಾಗ ಕೇವಲ ಕೆಲವರ ಉಪಯೋಗಕ್ಕೆ ಮಾತ್ರ ಬರುವಂತಹ ಕಸಾಯಿಖಾನೆಯಂತಹ ಆದ್ಯತೆಯಲ್ಲದ ವಿಷಯಕ್ಕೆ ಖಾದರು ಯಾಕೆ ಮಹತ್ವ ನೀಡಿದರು ಎಂಬುದೀಗ ಪ್ರಶ್ನೆಯಾಗಿದೆ. ಕಸಾಯಿಖಾನೆ ಆಧುನೀಕರಣದಲ್ಲಿ ಮಂಗಳೂರಿನ ಹಿತಾಸಕ್ತಿಗಿಂತ ಸಚಿವ ಯು. ಟಿ. ಖಾದರ್ ಅವರ ಸ್ವಹಿತಾಸಕ್ತಿ ಹೆಚ್ಚು ಕೆಲಸ ಮಾಡಿತೆ ಎಂಬುದು ಕೆಲವರ ಅನುಮಾನವಾಗಿದೆ.

ಬಿಜೆಪಿ ಮತ್ತು ಸಂಘಪರಿವಾರವಾರ ಎತ್ತಿದ ಪ್ರಶ್ನೆಗಳಿಗೆ ಸಚಿವ ಖಾದರ್ ಹೇಗೆ ಉತ್ತರಿಸಿರಲಿ, ಅದು ರಾಜಕೀಯ ಎಂದು ನಿರ್ಲಕ್ಷಿಸಬಹುದು. ಆದರೆ ಮಂಗಳೂರಿನ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಸಚಿವ ಖಾದರ್ ಹೆಚ್ಚು ಜವಾಬ್ದಾರಿಯಿಂದ ಉತ್ತರಿಸುವ ಸೌಜನ್ಯ ತೋರುವರೆ ಎಂದು ಕಾದು ನೋಡಬೇಕಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ