ನೀನಾ ಹಂತಕಿ ?ಫಿರ್ದೌಸ್ ಎಂಬ ಪಾಪಿಯ ಕೃತ್ಯಕ್ಕೆ ಬೆಚ್ಚಿ ಬಿದ್ದ ಕರಾವಳಿ!

ಮಝರ್ ಕುಂದಾಪುರ/ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಕರಾವಳಿಯನ್ನು ಅದರಲ್ಲೂ ಕರಾವಳಿಯ ಮುಸ್ಲಿಂ ಸಮುದಾಯವನ್ನು ಬೆಚ್ಚಿ ಬೀಳಿಸಿದ್ದ ಗಂಜಿಮಠದ ಸಮೀರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಮೀರ್ ಪತ್ನಿ ಫಿರ್ದೌಸ್ ಮತ್ತು ಆಕೆಯ ಪ್ರಿಯಕರ ಆಸಿಫ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ದ.ಕ. ಜಿಲ್ಲೆಗೆ ಆಗಮಿಸಿ ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಆತ ನೀಡಿದ ಮಾಹಿತಿಯನ್ನು ಆಧರಿಸಿ ಸಮೀರ್‌ನ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರ ಕಾರ್ಕಳ ಮೂಲದ ಆಸಿಫ್‌ನನ್ನು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದರು.

ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ನ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರನಿಗೆ ನ್ಯಾಯಾಲಯ 2 ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಏನಿದು ಪ್ರಕರಣ? ಯಾರೀಕೆ ಫಿರ್ದೌಸ್?
ಕಳೆದೆರಡು ವಾರಗಳಿಂದ ಅವಿಭಜಿತ ಜಿಲ್ಲೆಗಳ ಇಡೀ ಮುಸ್ಲಿಂ ಸಮುದಾಯವೇ ಕಳೆದ ಹದಿನೈದು ದಿವಸಗಳಿಂದ ತಲ್ಲಣಗೊಂಡಿದೆ, ವಾಟ್ಸ್ಯಾಪ್, ಫೇಸ್‍ಬುಕ್ ಮುಂತಾದ ಜಾಲತಾಣಗಳಲ್ಲಿ ಮುಸ್ಲಿಂ ಯುವತಿಯೋರ್ವಳ ಫೋಟೋ ಅವಳ ಪ್ರಿಯಕರನ ಜೊತೆ ವೈರಲ್ ಆಗಿ ಹರಿದಾಡುತ್ತಿದೆ. ವಾಂಟೆಂಡ್ ಎಂಬ ಶೀರ್ಷಿಕೆಯಡಿ ಕೂಡಲೇ ಠಾಣೆಗೆ ಸಂದೇಶ ನೀಡಿ ಎಂಬ ಟ್ಯಾಗ್‍ಲೈನ್ ಕೂಡ ಕಂಡುಬರುತ್ತಿದೆ. ಇದಕ್ಕೆ ಕಾರಣಳಾದವಳು ಫಿರ್ದೌಸ್ಎಂಬ ಮಹಿಳೆ.


                 ಹತ್ಯೆಯಾದ ಸಮೀರ್ ಮತ್ತು  ಹಂತಕಿ ಫಿರ್ದೌಸ್ ತಮ್ಮ ಮಗುವಿನ ಜೊತೆ

ತನಗೆ ಬದುಕು ಕಲ್ಪಿಸಿಕೊಟ್ಟವನನ್ನೇ ಭೀಬತ್ಸವಾಗಿ ಹತ್ಯೆ ನಡೆಸಿ ನಿರ್ದಯಿ ಪಾತಕದ ಪುಟಗಳಲ್ಲಿ ತನ್ನ ಹೆಸರನ್ನು ಕರಾಳವಾಗಿ ಅಚ್ಚೊತ್ತಿಸಿಕೊಂಡವಳೇ ಕಾಪು ಮೂಲದ ಈ ಫಿರ್ದೌಸ್. ಈ ಮೊದಲು ತನ್ನ ಊರಿನವನೇ ಆದ ಯುವಕನೋರ್ವನನ್ನು ನಿಖಾ ಮಾಡಿಕೊಂಡಿದ್ದ ಈಕೆ ಮಹತ್ವಾಕಾಂಕ್ಷಿ. ಬದುಕಿನ ಪ್ರತೀ ಕ್ಷಣಗಳನ್ನು ಅನುಭವಿಸಬೇಕು ಎಂಬ ಶೋಕಿಗೆ ಬಿದ್ದ ಇವಳ ಲೈಫ್ ಸ್ಟೈಲೇ ಅಂತಿಮವಾಗಿ ಇವಳನ್ನು ಹಂತಕಿಯ ಸ್ಥಾನದಲ್ಲಿ ತಂದು ನಿಲ್ಲಿಸಿತ್ತಾ? ಗೊತ್ತಿಲ್ಲ.

ಮದುವೆಯಾಗಿ ಒಂದು ತಿಂಗಳು ತನ್ನ ಗಂಡನ ಜೊತೆ ಕಳೆದ ಇವಳು ಮೆಲ್ಲನೆ ಗಂಡನ ಮನೆಯವರ ವಿರುದ್ಧವೇ ಹರಿಹಾಯತೊಡಗಿದಳು. ವಿವಾಹಕ್ಕೂ ಮೊದಲೇ ಬೇರೊಬ್ಬನ ಜೊತೆ ಪ್ರೀತಿ ಪ್ರೇಮದ ಸಂಬಂಧದಲ್ಲಿದ್ದ ಮಡದಿಯ ಅಸಲಿ ರೂಪ ಅನಾವರಣಗೊಳ್ಳುತ್ತಲೇ ಬೆಚ್ಚಿಬಿದ್ದ ಈಕೆಯ ಗಂಡ ಅವಳನ್ನು ತಲಾಖ್ ನೀಡುವ ನಿರ್ಧಾರಕ್ಕೆ ಬಂದಿದ್ದ. ಅದಕ್ಕೂ ಮೊದಲೇ ನಾನು ನಿನ್ನ ಜೊತೆ ಬಾಳಲಾರೆ ಎಂದು ಗಂಡನಿಗೆ ಖುಲಾ ನೀಡಿ ನೇರವಾಗಿ ಕಾಪುವಿನ ತನ್ನ ಮನೆ ಸೇರಿಕೊಂಡಿದ್ದಳು ಫಿರ್ದೌಸ್.

ಫಿರ್ದೌಸ್‌ಳ ಬಲೆಗೆ ಬಿದ್ದ ಸಮೀರ್ ಎಂಬ ನಿಷ್ಪಾಪಿ
ಮಂಗಳೂರು ಸಮೀಪದ ಗಂಜಿಮಠದ ಅಹಮ್ಮದ್ ಸಾಹೇಬರ ಎರಡು ಗಂಡು ಮಕ್ಕಳಲ್ಲಿ ಹಿರಿಯವನೇ ಈ ಸಮೀರ್. ಅತ್ಯಂತ ಕಷ್ಟದಿಂದ ಬದುಕನ್ನು ಕಟ್ಟಿಕೊಂಡಿದ್ದ ಸಮೀರ್ ಕೆಲವು ವರ್ಷಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ಸೇರಿ ಅಲ್ಲಿ ಉತ್ತಮ ಉದ್ಯೋಗದಲ್ಲಿದ್ದ. ಎರಡು ತಂಗಿಯಂದಿಯರಿಗೆ ಮದುವೆಯಾಗಿದೆ, ತಮ್ಮ ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದಾನೆ. ಮನೆಯಲ್ಲಿ ತಾಯಿಯೊಬ್ಬರೇ ಇರುವ ಕಾರಣ ಕಳೆದೆರಡು ವರ್ಷಗಳ ಹಿಂದೆ ಸಮೀರ್‌ಗೆ ನಿಖಾ ಮಾಡಲು ಯೋಚಿಸಲಾಗಿತ್ತು. ಆರಂಭದಲ್ಲಿ ತನಗೆ ಮದುವೆ ಇಷ್ಟು ಬೇಗ ಬೇಡ ಎಂದು ಹೇಳಿದ ಸಮೀರ್ ಕೊನೆಗೂ ತಾಯಿಯ ಅಗ್ರಹಕ್ಕೆ ಮಣಿದು ಜೀ.. ಹಾಂ ಹೇಳಿದನಲ್ಲದೇ ದುಲ್ಹನ್ ಹುಡುಕುವ ಹೊಣೆಯನ್ನು ತಾಯಿಗೆ ಒಪ್ಪಿಸಿದ್ದಾನೆ.

ಅದಾಗಲೇ ಅವನ ತಾಯಿಯ ಮನಸ್ಸಿನಲ್ಲಿ ಎದ್ದು ಬಂದವಳೇ ಕಾಪುವಿನ ಈ ಫಿರ್ದೌಸ್. ರಸ್ತೆಯಲ್ಲಿದ್ದ ಮಾರಿ ಮನೆಹೊಕ್ಕಲು ಅಣಿಯಾಗಿತ್ತಾ? ಸಮೀರನ ತಾಯಿಯ ಸ್ವತಃ ತಂಗಿಯ ಮಗಳು, ಗಂಡನಿಂದ ವಿಚ್ಚೇದನ ಪಡೆದು ವಿರಾಗಿಣಿಯಂತೆ ಜೀವನ ನಡೆಸುತ್ತಿದ್ದಾಳೆ. ಅವಳಿಗೊಂದು ಬದುಕನ್ನ ಕಲ್ಪಿಸಿಕೊಟ್ಟರೇ ಅಲ್ಲಾಹುನು ಸಹಾ ಮೆಚ್ಚುವನು ಎಂದು ಮಗನಿಗೆ ಹೇಳಿದ ಸಮೀರನ ತಾಯಿ ತಂಗಿಯ ಮಗಳಾದ ಫಿರ್ದೌಸ್‍ನನ್ನು ಸೊಸೆಯಾಗಿ ತರುವ ಇಂಗಿತ ವ್ಯಕ್ತಪಡಿಸುತ್ತಾಳೆ. ತಾಯಿಯ ಆಸೆಗೆ ಹಾ ಎಂದ ಸಮೀರ್ ವಿಚ್ಚೇದಿತೆ ಫಿರ್ದೌಸ್‍ಳಿಗೆ ಬಾಳು ಕೊಡಲು ಮುಂದಾಗುತ್ತಾನೆ.
                       

ಕಳೆದ ಎರಡು ವರ್ಷಗಳ ಹಿಂದೆ ಅತ್ಯಂತ ಸಂಭ್ರಮದಿಂದಲೇ ಫಿರ್ದೌಸ್‍ಳನ್ನು ವಿವಾಹವಾದ ಸಮೀರ್ ನಯೀ ದುಲ್ಹನ್‍ಳನ್ನು ಗಂಜಿಮಠದ ತನ್ನ ಮನೆಗೆ ತುಂಬಿಸಿಕೊಳ್ಳುತ್ತಾನೆ. ಫಿರ್ದೌಸ್‍ಳ ದಾಂಪತ್ಯ ಜೀವನದ ಬದುಕು ಎರಡನೇ ಬಾರಿ ಹೀಗೇ ಗಂಜಿಮಠದ ಸಮೀರ್‌ನ ಮನೆಯಲ್ಲಿ ತೆರೆದುಕೊಳ್ಳುತ್ತದೆ. ಮದುವೆ ನಂತರ ಒಂದಷ್ಟು ಸಮಯ ಊರಿನಲ್ಲಿದ್ದ ಸಮೀರ್ ಮತ್ತೇ ಸೌದಿ ಸೇರಿಕೊಳ್ಳುತ್ತಾನೆ. ದಿನಗಳು ಉರುಳುತ್ತವೆ, ಈ ನಡುವೆ ಗರ್ಭವತಿಯಾದ ಫಿರ್ದೌಸ್ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ.

ತನ್ನ ಪತ್ನಿಯನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಮೀರ್ ಮಗು ಹಾಗೂ ಹೆಂಡತಿಯನ್ನು ನೋಡುವ ಆಸೆಯಿಂದಲೇ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಆಗಮಿಸುತ್ತಾನೆ. ಈ ಸಂದರ್ಭದಲ್ಲಿ ಗಂಡನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಫಿರ್ದೌಸ್ಮೆಲ್ಲಗೆ ತನಗೆ ವಿಮಾನದಲ್ಲಿ ಪಯಣಿಸುವ ಆಸೆಯಾಗಿದೆ ಎಂದು ಗಂಡನಲ್ಲಿ ಹೇಳಿದ್ದಾಳೆ. ಪ್ರೀತಿಯ ಮಡದಿಯ ಆಸೆಗೆ ತಣ್ಣೀರೆರಚದ ಸಮೀರ್ ಹೆಂಡತಿ ಹೇಳಿದಂತೆ ಊಟಿಗೆ ಪ್ರವಾಸಕ್ಕೆ ತೆರಳಲು ಓಕೆ ಎನ್ನುತ್ತಾನೆ.

ಅದರಂತೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ಮಡದಿ ಹಾಗೂ ಮಗುವಿನೊಂದಿಗೆ ತೆರಳುತ್ತಾನೆ. ಆದರೆ ಅತ್ಯಂತ ಪ್ರೀತಿಯಿಂದ ಪಕ್ಕದಲ್ಲಿ ಅಪ್ಪಿಕೊಂಡು ಕುಳಿತ್ತಿದ್ದ ಪತ್ನಿಯ ಆತ್ಮದೊಳಗೆ ಅದಾಗಲೇ ಕ್ರೂರ ಹಂತಕನೋರ್ವ ಸದ್ದಿಲ್ಲದೇ ಸೇರಿಕೊಂಡಿರುವ ವಿಚಾರ ನಿಷ್ಪಾಪಿ ಸಮೀರ್‌ಗಾದರೂ ಎಲ್ಲಿ ಗೊತ್ತು? ಅಲ್ಲೇ ಅನತಿ ದೂರದಲ್ಲಿ ಸಾವೆಂಬ ಸಾವು ಸದ್ದಿಲ್ಲದೇ ವಿಕಾರವಾಗಿ ತನ್ನನ್ನು ಅತ್ಯಂತ ಸಹನೆಯಿಂದ ಕಾಯುತ್ತಿರುವ ವಿಷಯ ಸಮೀರ್‍ನ ಅರಿವಿಗಾದರೂ ಹೇಗೆ ಬಂದಿತ್ತು?ಸಮೀರ್ ತಂಗಿದ್ದ ಲಾಜ್‌ನ ಸಿಸಿಟಿವಿ ದೃಶ್ಯದಲ್ಲಿ ಸಮೀರ್ ಮತ್ತು ಫಿರ್ದೌಸ್ ಜೊತೆ ಕಾಣಿಸಿರುವ ಆಸಿಫ್


ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದಿಂದ ಇಳಿದ ದಂಪತಿಗಳು ಆ ಮೊದಲೇ ಫಿರ್ದೌಸ್ಬುಕ್ ಮಾಡಿದ ಲಾಡ್ಜ್‍ನಲ್ಲಿ ಉಳಿಯುತ್ತಾರೆ. ಮರುದಿನ ಅಲ್ಲಿಂದ ಊಟಿಗೆ ತೆರಳಲು ಟ್ಯಾಕ್ಷಿ ಚಾಲಕನೋರ್ವ ಬೆಳ್ಳಂ ಬೆಳ್ಳಗೆ ದಂಪತಿಗಳು ಉಳಿದುಕೊಂಡಿರುವ ಲಾಡ್ಜ್‍ಗೆ ಬರುತ್ತಾನೆ. ಅಂದಹಾಗೇ ಅವನು ಅಸೀಫ್! ಕಾರ್ಕಳ ಮೂಲದವನು. ಮದುವೆಯಾಗಿ ಎರಡು ಪುಟ್ಟ ಮಕ್ಕಳಿವೆ. ಮೊದಲು ಕಾರ್ಕಳದಲ್ಲಿ ವಾಹನ ಓಡಿಸುತ್ತಿದ್ದ ಅಸೀಫ್ ತದನಂತರ ಬೆಂಗಳೂರಿನಲ್ಲಿ ವಾಹನಗಳನ್ನು ಇರಿಸಿ ಬಾಡಿಗೆಗೆ ಓಡಿಸುತ್ತಿದ್ದ ಎನ್ನಲಾಗುತ್ತಿದೆ. ಅದು ಅಗಸ್ಟ್ 15ರ ದುಷ್ಟ ಮುಂಜಾವು. ಲಾಡ್ಜ್‍ನಲ್ಲಿ ಉಳಿದಿದ್ದ ಸಮೀರ್ ತಾಯಿಗೆ ಕರೆ ಮಾಡಿ ತಾನೀಗ ಊಟಿಗೆ ಮಡದಿ ಮಗುವಿನೊಂದಿಗೆ ಕಾರಿನಲ್ಲಿ ಹೊರಡಲಿದ್ದೇನೆ ನೀನು ಚಿಂತೆ ಮಾಡಬೇಡ ಕೂಡಲೇ ಬರುತ್ತೇನೆ ಎಂದು ಹೇಳಿದ್ದಾನೆ. ಮತ್ತದೇ ಕೊನೆ ಆ ತಾಯಿಗೆ ಮಗನ ಸ್ವರವನ್ನು ಮತ್ತೇ ಕೇಳುವ ಭಾಗ್ಯವೇ ಇರಲಿಲ್ಲ.
ಮಗುವಿನೊಂದಿಗೆ ಬಂದಳು ಫಿರ್ದೌಸ್

ಸೆಪ್ಟೆಂಬರ್ 18ರ ಬೆಳ್ಳಂಬೆಳ್ಳಗೆ ಕಾಪುವಿನಲ್ಲಿರುವ ತನ್ನ ತವರು ಮನೆಗೆ ಮೂರು ತಿಂಗಳ ಮಗುವಿನೊಂದಿಗೆ ಅಚಾನಕ್ ಆಗಿ ಕದ ತಟ್ಟಿದ್ದಾಳೆ ಫಿರ್ದೌಸ್. ಒಂದು ಕ್ಷಣ ಅವಕ್ಕಾದ ಮನೆಯವರು ಸಮೀರ್ ಎಲ್ಲಿ, ಒಬ್ಬಳೇ ಹೇಗೆ ಬಂದೇ, ಏನಾಯ್ತು ಎಂದು ಆತಂಕದಿಂದ ವಿಚಾರಿಸಿದ್ದಾರೆ. ಅಯ್ಯೋ ನನ್ನ ಗಂಡನಿಗೆ ಈಗಾಗಲೇ ಬೇರೆ ಸ್ತ್ರೀಯ ಜೊತೆ ಸಂಬಂಧವಿದೆ ಬೆಂಗಳೂರಿನ ಏರ್‍ಪೋರ್ಟ್‍ನಲ್ಲಿ ನನ್ನನ್ನು ಮತ್ತು ಮಗುವನ್ನು ಬಿಟ್ಟು ಅವಳ ಜೊತೆ ಓಡಿ ಹೋಗಿದ್ದಾರೆ ಎಂಬ ಕಲಾತ್ಮಕವಾದ ಕತೆಯನ್ನು ಹಣೆದಿದ್ದಾಳೆ ಫಿರ್ದೌಸ್.

ಇತ್ತ ಗಂಜಿಮಠದಲ್ಲಿ ಸಮೀರ್‍ನ ತಂದೆ ಅಹಮ್ಮದ್ ಸಾಹೇಬರಿಗೆ ವಿಷಯ ತಿಳಿದು ಮಗ ಎಲ್ಲಿ ಹೋದ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಸೊಸೆಯ ಆರೋಪ ಕೇಳಿ ಇನ್ನಷ್ಟು ಭೂಮಿಗಿಳಿದು ಹೋದ ಅವರು ನೇರವಾಗಿ ಬಜ್ಪೆ ಠಾಣೆಗೆ ಮಗ ಸಮೀರ್ ನಾಪತ್ತೆಯಾಗಿರುವ ದೂರನ್ನು ದಾಖಲಿಸುತ್ತಾರೆ. ಆದರೆ ಎರಡು ಮೂರು ದಿನಗಳು ಕಳೆದರೂ ಸಮೀರ್‌ನ ಪತ್ತೆಯೇ ಇರಲಿಲ್ಲ. ಅಷ್ಟರಲ್ಲಿಯೇ ಚೆನೈ ಸಮೀಪದ ರಸ್ತೆಯೊಂದರ ಪಕ್ಕ ಅರ್ಧಂಬರ್ಧ ಹೂಳಲಾಗಿದ್ದ ಅಪರಿಚಿತ ಯುವಕನ ಶವವೊಂದು ಮುಖಕ್ಕೆ ಏಸಿಡ್ ಸುರಿದು ಕುತ್ತಿಗೆಯನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಗೋಚರಿಸುತ್ತಿದೆ. ಶವದ ಮೇಲಿನ ಜೀನ್ಸ್ ಪ್ಯಾಂಟ್, ಶರ್ಟ್ ಹಾಗೂ ಕೆಲವು ಚಹರೆಗಳನ್ನು ಕಲೆ ಹಾಕಿ ಕುಳಿತ ಚೆನೈ ಪೊಲೀಸರು ಶವದ ಐಡೆಂಟಿಪೈಗೆ ತಡಕಾಡುತ್ತಾರೆ. ಈ ಅಪರಿಚಿತ ಶವದ ವಿಷಯ ಬಜ್ಪೆ ಠಾಣೆಯ ಗೋಡೆಗಳಲ್ಲೂ ಸದ್ದು ಮಾಡುತ್ತಿವೆ.  ಅದೇ ಸುಳಿವಿನ ಮೇಲೆ ಗಂಜಿಮಠದ ಸಮೀರ್‌ನ ಸ್ನೇಹಿತರು ಮತ್ತು ಸಂಬಂಧಿಗಳು ಚೆನೈಗೆ ಹೋಗಿ ಬರ್ಬರ ರೀತಿಯಲ್ಲಿ ಹತ್ಯೆಯಾಗಿ ಕೊಳೆಯುವ ಸ್ಥಿತಿಯಲ್ಲಿದ್ದ ಶವವನ್ನು ನೋಡಿ ಬೆಚ್ಚಿಬೀಳುತ್ತಾರೆ. ಅಲ್ಲಿ ವಿಕಾರವಾಗಿ ಮಲಗಿತ್ತು ಸಮೀರ್‌ನ ಶವ. ಸಮೀರ್ ಈಸ್ ನೋ ಮೋರ್ !

ನಾಪತ್ತೆಯಾದಳು ಫಿರ್ದೌಸ್
ಅತ್ತ ಚೆನೈಯ ನಿಷ್ಠೂರ ರಸ್ತೆಯ ಪಕ್ಕ ಪತ್ತೆಯಾಗಿರುವ ಶವ ತನ್ನ ಗಂಡ ಸಮೀರ್‍ನದ್ದು ಎಂಬ ವಿಷಯ ಅಲೆಅಲೆಯಾಗಿ ಕಾಪುವಿನ ತಾಯಿ ಮನೆಯಲ್ಲಿದ್ದ ಫಿರ್ದೌಸ್‍ನ ಕಿವಿಗೆ ಅಪ್ಪಳಿಸುತ್ತಲೇ ತನ್ನ ಗಂಡನಿಗೆ ಸೇರಿದ ಅಗಾಧ ಚಿನ್ನಾಭರಣ ಹಾಗೂ ಹಣದೊಂದಿಗೆ ಫಿರ್ದೌಸ್ಬೆಳ್ಳಂ ಬೆಳ್ಳಗೆ ನಾಪತ್ತೆಯಾಗುತ್ತಾಳೆ. ಆದರೆ ಮೂರು ತಿಂಗಳ ಮಗುವನ್ನು ಮಾತ್ರ ಅದ್ಯಾವ ಕರುಣೆ, ಕಾರುಣ್ಯಗಳ ಹಂಗಿಲ್ಲದೇ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ ಈ ನರ ರಾಕ್ಷಸಿ ಫಿರ್ದೌಸ್.

    ತಮಿಳುನಾಡು ಪೊಲೀಸ್ ವಶದಲ್ಲಿ ಸಮೀರ್ ಪತ್ನಿ ಫಿರ್ದೌಸ್ ಮತ್ತು ಪ್ರಿಯಕರ ಆಸಿಫ್

ಸಮೀರ್‌ನ ಪ್ರಕರಣ ಸುದ್ಧಿಯಾಗುತ್ತಲೇ ಮಂಗಳೂರಿನಿಂದ ಹಿಡಿದು ಗಲ್ಫ್‌ನ ಮೂಲೆ ಮೂಲೆಗಳಲ್ಲಿರುವ ಮುಸ್ಲಿಂ ಸಮುದಾಯ ತಲ್ಲಣಿಸಲು ಕಾರಣವಾಗಿ ಹೋಗುತ್ತದೆ. ಇಷ್ಟಕ್ಕೂ ಫಿರ್ದೌಸ್ಹಂತಕಿಯಾ? ಸಮೀರ್‌ನ ಮಡದಿಯಾಗಿ ಅವನ ಮನೆಯಲ್ಲಿ ಕಾಲಿಟ್ಟಿದ ಫಿರ್ದೌಸ್‍ಗೆ ಆರಂಭದ ದಿನಗಳು ಅತ್ಯಂತ ಹಸನಾಗಿ ಕಳೆದಿವೆ. ವಿಚ್ಚೇದಿತಳಾದ ತನ್ನನ್ನು ನಿಖಾ ಮಾಡಿ ತನಗೆ ಬಾಳು ಕೊಟ್ಟ ಸಮೀರ್ ಬಗ್ಗೆ ಒಂದಷ್ಟು ಪ್ರೀತಿ, ಕಾಳಜಿ, ವಿಶ್ವಾಸ ಆಕೆಯಲ್ಲಿ ಮೂಡಿತ್ತಾ ಗೊತ್ತಿಲ್ಲ?

ಆದರೆ ದಿನಗಳು ಉರುಳಿದಂತೆ ಅವಳ ಮನಸ್ಸಿನೊಳಗೆ ಹುದುಗಿ ಹೋಗಿದ್ದ ವೈಭವಯುತ ಜೀವನ ಮತ್ತೇ ಗರಿಬಿಚ್ಚಿ ನಲಿಯಲಾರಂಭಿಸಿದೆ. ಅದಾಗಲೇ ಸಂಪರ್ಕದಲ್ಲಿದ್ದ ಪ್ರಿಯತಮ ಕಾರ್ಕಳದ ಅಸೀಫ್ ಎಂಬ ಹರಾಮಿ ಅವಳ ಲೈಫ್ ಸ್ಟೈಲ್‍ಗೆ ಮತ್ತೊಂದು ಮಿಂಚನ್ನು ಹರಿಸಿದ್ದಾನೆ. ಕದ್ದುಮುಚ್ಚಿ ಇವರ ಪ್ರಣಯ ನಡೆದಿರುವ ಬಗ್ಗೆ ಯಾರಿಗೂ ಕಿಂಚಿತ್ತೂ ಸುಳಿವೇ ಇರಲಿಲ್ಲ. ಬದುಕಿನ ಪ್ರತಿ ಕ್ಷಣಗಳನ್ನೂ ಸಂಭ್ರಮದಿಂದ ಜೊತೆಯಾಗಿ ಅನುಭವಿಸುವ ತೆವಲಿಗೆ ಬಿದ್ದ ಫಿರ್ದೌಸ್‍ಳ ಕನಸುಗಳಿಗೆ ಸಮೀರ್ ಅಡ್ಡಿಯಾಗಿ ಗೋಚರಿಸತೊಡಗಿದ್ದಾನಾ?

 ಅದಾಗಲೇ ಕನಸಿನ ಕುದುರೆ ಏರಿ ಕೆನೆಯುತ್ತಿರುವ ಅಸೀಫ್‍ನ ಜೊತೆ ಸವಾರಿ ಮಾಡಲು ಸಜ್ಜಾಗಿ ಕುಂತ ಫಿರ್ದೌಸ್ತನ್ನದೊಂದು ಬದುಕನ್ನು ಕಲ್ಪಿಸಿಕೊಟ್ಟ ಸಮೀರ್‌ನ ಅಂತ್ಯಕ್ಕೆ ಮುಹೂರ್ತವಿಕ್ಕಿಯೇ ಬಿಟ್ಟಳಾ? ತನ್ನ ವಿಮಾನ ಪ್ರಯಾಣದ ಆಸೆಯನ್ನು ಹೇಳಿ ಬೆಂಗಳೂರಿಗೆ ಪತಿ ಹಾಗೂ ಮಗುವಿನ ಜೊತೆ ಬಂದ ಫಿರ್ದೌಸ್ಮೊದಲೇ ನಿರೂಪಿಸಿದ ಯೋಜನೆಯಂತೆ ಲಾಡ್ಜ್‍ನಿಂದ ಅಸೀಫ್‍ನನ್ನು ಅಲ್ಲಿ ಟ್ಯಾಕ್ಸಿ ಚಾಲಕನ ರೂಪದಲ್ಲಿ ಬರಮಾಡಿಸಿಕೊಂಡು ಊಟಿಗೆ ತೆರಳುತ್ತಾಳೆ. ಮತ್ತದೇ ಕೊನೆ ಸಮೀರ್ ಕಂಡುಬಂದಿದ್ದು ಶವವಾಗಿ, ಅದು ಸಹಾ ಬರ್ಬರವಾಗಿ ಹತ್ಯೆ ಮಾಡಿದ ಸ್ಥಿತಿಯಲ್ಲಿ!

ಕೇಳಿಬರುವ ಪ್ರಕಾರ ಇವರೊಬ್ಬರೇ ಸಮೀರ್‍ನ್ನು ಹತ್ಯೆ ಮಾಡಿದ್ದಾರಾ ಅಥವಾ ಸುಫಾರಿ ನೀಡುವ ಮೂಲಕ ಸಮೀರ್‍ನ ಅಂತ್ಯಕ್ಕೆ ನಾಂದಿ ಹಾಕಿದ್ದಾರಾ ಎನ್ನುವುದು ಪೊಲೀಸ್ ತನಿಖೆಯ ನಂತರವೇ ತಿಳಿದುಬರಲಿದೆ. ಅಭಾಗ್ಯೆಗೊಂದು ಭಾಗ್ಯ ಕಲ್ಪಿಸಿ ಅವಳಿಗೊಂದು ಬದುಕು ನೀಡಿದ ಸಮೀರ್ ಮಾತ್ರ ತನ್ನ ಪತ್ನಿಯಿಂದಲೇ ಹತನಾಗಿ ಹೋಗಿದ್ದಾನೆ ಎಂಬ ಕರ್ಣ ಕಠೋರ ಸುದ್ಧಿ ಮಾತ್ರ ಇಡೀ ಮುಸ್ಲಿಂ ಸಮುದಾಯವನ್ನು ತಲ್ಲಣಗೊಳಿಸಿಬಿಟ್ಟಿದೆ.


ಅಯ್ಯೋ ಅವನನ್ನು ಕೊಲ್ಲಲು ಅವನಿಗೆ ಮನಸ್ಸಾದರೂ ಹೇಗೆ ಬಂತು? ಹೆತ್ತ ಕರಳ ಆಕ್ರಂದನ
 ಸಣ್ಣ ಮಕ್ಕಳಿಗೂ ಗದರಿಸಿ ಮಾತನಾಡದಿದ್ದ ಸಮೀರ್‍ನನ್ನು ಕೊಲ್ಲಲು ಆ ರಕ್ಕಸಿಗೆ ಮನಸ್ಸಾದರೂ ಹೇಗೆ ಬಂತು. ಬದುಕನ್ನೇ ಕಳೆದುಕೊಂಡವಳಿಗೆ ಬದುಕನ್ನು ನೀಡಿದ್ದೇ ನನ್ನ ಮಗ ಮಾಡಿದ ತಪ್ಪಾ? ಬೇಕಾದರೆ ತನಗೆ ಮನಸ್ಸಿದ್ದವನ ಜೊತೆ ಸಮೀರ್‍ನನ್ನು ಬಿಟ್ಟು ಹೋಗಬಹುದಿತ್ತು. ಆದರೆ ನನ್ನ ಅಮಾಯಕ ಮಗನನ್ನು ಹತ್ಯೆ ಮಾಡಿದ್ದು ಯಾಕೆ, ನೀನಿಷ್ಟು ನಿರ್ದಯಿಯಾ? ಹಾಗೆಂದು ರೋಧಿಸುವ ಸಮೀರನ ತಾಯಿಯ ನೋವಿಗೆ ಅಂತ್ಯವಿಲ್ಲ. ಸ್ವತಃ ತನ್ನ ತಂಗಿಯ ಮಗಳೇ ನನ್ನ ಮನೆಯ ದೀಪವನ್ನು ಶಾಶ್ವತವಾಗಿ ನಂದಿಸುತ್ತಾಳೆ ಎನ್ನುವುದು ಆ ಮಹತಾಯಿಗಾದರೂ ಎಲ್ಲಿ ಗೊತ್ತು. ಆದರೆ ಇದ್ಯಾವುದರ ಪರಿವೆಯೇ ಇಲ್ಲದೇ ಸಮೀರ್‍ನ ಮೂರು ತಿಂಗಳ ಪುಟ್ಟ ಮಗು ಮಾತ್ರ ಇದೀಗ ತನ್ನ ತಂದೆಯ ಮನೆಯಾದ ಗಂಜಿಮಠದ ತೊಟ್ಟಿಲಲ್ಲಿ ಕಣ್‍ಕಣ್ ಬಿಡುತ್ತಿದೆ. ಮೂರು ತಿಂಗಳ ನನ್ನನ್ನು ತೊರೆದು ಹೋಗಿರುವ ತಾಯಿಯ ಬಗ್ಗೆ ಇನ್ನೆಂದೂ ಈ ಧರೆಗೆ ಮರಳಿ ಬಾರದ ತಂದೆಯ ಬಗ್ಗೆ ಆ ಅಮಾಯಕ ಜೀವಕ್ಕೇನು ಗೊತ್ತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ