ಶಾಸ್ತ್ರಿ ಆತ್ಮಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್‌ಗೆ ವಾರಂಟ್

ಕರಾವಳಿ ಕರ್ನಾಟಕ ವರದಿ

ಪುತ್ತೂರು
: ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಗಾಯಕಿಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಸಂಘ ಪರಿವಾರ ಮುಖಂಡ ಕಲ್ಲಡ್ಕ ಪ್ರಬಾಕರ ಭಟ್, ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಮತ್ತು ಬೋನಂತಾಯ ಶಿವಶಂಕರ ಭಟ್ ಅವರಿಗೆ ವಾರಂಟ್ ಜಾರಿಗೊಳಿಸಿದೆ.

ಶ್ಯಾಮ ಪ್ರಸಾದ್ ಶಾಸ್ತ್ರಿ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ವಾರಂಟ್ ಜಾರಿಗೊಳಿಸಲಾಗಿದೆ.

ಪ್ರಕರಣದ ವಿಚಾರಣೆ ಈ ತಿಂಗಳ ಅಂತ್ಯಕ್ಕೆ ನಡೆಯಲ್ಲಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದ್ದು, ರಾಘವೇಶ್ವರ ಶ್ರೀಗೆ ಸಮನ್ಸ್ ಜಾರಿ ಮಾಡಲಾಗಿದೆ.

ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್.ಎಸ್,ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಶ್ರೀ ಸೇರಿ ಮೂವರ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಶ್ಯಾಂ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೆ ಪ್ರಚೋದನೆ, ಬೆದರಿಕೆ ಮತ್ತು ನಿಂದೆ ಆರೋಪದಲ್ಲಿ ಸಿಐಡಿ ಡಿವೈಎಸ್ಪಿ ಆರ್. ವಾಸು ಅವರು ಆರೋಪಪಟ್ಟಿ ಸಲ್ಲಿಸಿದ್ದರು. ಮೂವರು ಆರೋಪಿಗಳು ಹಾಕಿದ್ದರೆನ್ನಲಾದ ಬೆದರಿಕೆ ಕರೆಯ ಆಡಿಯೋ ದಾಖಲೆಯನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ ಎನ್ನಲಾಗಿದೆ.

ಸೆ.1, 2014ರಂದು ಪುತ್ತೂರಿನ ಕೆದಿಲ ಗ್ರಾಮದಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಶ್ಯಾಂ ಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಶ್ರೀ ಮತ್ತು ಪುತ್ತೂರು ಹವ್ಯಕ ವಲಯ ಅಧ್ಯಕ್ಷ ಶಿವಶಂಕರ ಭಟ್ ವಿರುದ್ದ್ಗ ಪುತ್ತೂರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವಾಮಿ ಪರ ವಹಿಸುವಂತೆ ಹಾಕಲಾದ ಬೆದರಿಕೆಯ ಒತ್ತಡ ಸಹಿಸಲಾಗದೇ ಶ್ಯಾಂ ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದ್ದು, ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಆ ಬಳಿಕ ಸರಕಾರ ಸಿಐಡಿಗೆ ವಹಿಸಿದ್ದನ್ನು ಸ್ಮರಿಸಬಹುದು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ