ಸಿಎಂ ಹೇಳಿದ್ದು ಬಿಜೆಪಿ ವಿರುದ್ಧ ದಂಗೆ ವಿನಃ ಬೇರಾವ ದಂಗೆಯೂ ಅಲ್ಲ: ಡಿಸಿಎಂ ಪರಮೇಶ್ವರ್

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಬಿಜೆಪಿ ಪಕ್ಷವು ರಾಜ್ಯದ ಮುಖ್ಯಮಂತ್ರಿಗಳನ್ನು ಅವಹೇಳನಕಾರಿಯಾಗಿ ಮತ್ತು ಸರಕಾರವನ್ನು ಅಸ್ಥಿರಗೊಳಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ದಂಗೆ ಪದ ಪ್ರಯೋಗವಾಗಿದೆಯೇ ಹೊರತು ಸಿಪಾಯಿ ದಂಗೆಯ ರೀತಿ ಹೇಳಿದ್ದಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದ ಶ್ರೀ ಸಾತೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷವು ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಶಾಸಕರುಗಳಿಗೆ ಆಸೆ ಆಮಿಷ ಒಡ್ಡಿ ಕೊಳಕು ರಾಜಕಾರಣ ಮಾಡುತ್ತಿರುವುದನ್ನು ಕಂಡು ಬಿಜೆಪಿ ವಿರುದ್ಧ ದಂಗೆ ಎನ್ನುವ ಶಬ್ಧ ಬಳಸಿದ್ದಾರೆ. ಅದನ್ನು ಹೊರತು ಪಡೆಸಿ ಈ ಹಿಂದೆ ನಡೆದ ಸಿಪಾಯಿ ದಂಗೆಯ ಅರ್ಥದಲ್ಲಿ ಹೇಳಿದ್ದಲ್ಲ ಎಂದರು.

ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರು ಎಲ್ಲಿಯೂ ಹೋಗಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ನಮ್ಮ ಎರಡು ಪಕ್ಷಗಳಲ್ಲಿ ಒಗ್ಗಟ್ಟಾಗಿದ್ದಾರೆ. ಇದೆಲ್ಲವೂ ಬಿಜೆಪಿಯವರು ಹೇಳುವ ಸತ್ಯಕ್ಕೆ ದೂರವಾದ ಹೇಳಿಕೆಗಳಾಗಿವೆ ಎಂದು ಈ ವೇಳೆ ಪರಮೇಶ್ವರ ಪ್ರತಿಕ್ರಿಯಿಸಿದರು.

ಮಾಜಿ ಮುಖ್ಯಮತ್ರಿ ಯಡಿಯೂರಪ್ಪನವರು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ನಮ್ಮ ಹಾಗೂ ಜೆಡಿಎಸ್ ಶಾಸಕರು ಒಗ್ಗಾಟ್ಟಾಗಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ಸರಕಾರಕ್ಕೆ ತೊಂದರೆಯಾಗುವುದಿಲ್ಲ. ಈ ಬಾರಿ ಯಾವುದೇ ಪಕ್ಷ ಸ್ವಂತ ಶಕ್ತಿ ಮೇಲೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರಂತೆ ರಾಜ್ಯದ ಜನರಿಗೆ ಎರಡು ಪಕ್ಷಗಳು ಮಾತುಕೊಟ್ಟಿದ್ದು ಸಮ್ಮಿಶ್ರವಾಗಿ ಒಳ್ಳೆಯ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದು ಅದರಂತೆ ಅಭಿವೃದ್ಧಿ ಕಾರ್ಯಗಳು ನಡೆಸುತ್ತಿವೆ ಎಂದರು.

ರಾಜಕೀಯವಿಲ್ಲ
ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಶೃಂಗೇರಿ ಮಠಕ್ಕೆ ಭೇಟಿ ನೀಡಿರುವುದು ಹಾಗೂ ನಾನು ಇಂದೇ ತಾಯಿ ಶ್ರೀ ಸಾತೇರಿ ದೇವಿ ದರ್ಶನಕ್ಕೆ ಬಂದಿರುವುದು ಆಕಸ್ಮಿಕವಾಗಿದೆ. ಇದು ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಶ್ರೀ ಸಾತೇರಿ ದೇವಿಯ ಪವಿತ್ರ ಸ್ಥಳ. ಹೀಗಾಗಿ ದರ್ಶನ ಪಡೆದಿದ್ದೇನೆ. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಲೇಪನ ಬಡೆಯುವ ಅಗತ್ಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಶ್ರೀ ಸಾತೇರಿ ದೇವಿಗೆ ವಿಶೇಷ ಪೂಜೆ
ಬೆಳಿಗ್ಗೆ ನೇರವಾಗಿ ಹಣಕೋಣಕ್ಕೆ ಆಗಮಿಸಿದ ಡಿಸಿಎಂ ಜಿ. ಪರಮೇಶ್ವರ ಅವರು ಮೊದಲು ಶ್ರೀ ಸಾತೇರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ದೇವಿಗೆ ಬಂದ ಆಭರಣಗಳ ಹರಾಜಿನಲ್ಲಿ ಪಾಲ್ಗೊಂಡು ಮೂಗುತಿಯೊಂದನ್ನು ಪಡೆದುಕೊಂಡರು. ಈ ವೇಳೆ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮುಂತಾದವರು ಇದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ