ಬಂಧಿಗಳ ಜೊತೆ ಭಾವಯಾನ: ಕಾರಾಗೃಹದಲ್ಲಿ ಕನ್ನಡ ಕವಿತೆಗಳಿಗೆ ಕಿವಿಯಾದ ಕೈದಿಗಳು

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ಯಾವುದೋ ಕ್ಷಣದ ದುಡುಕಿನಿಂದ ತಪ್ಪು ಮಾಡಿ ಬಂಧನಕ್ಕೆ ಸಿಲುಕಿದವರು ಬೆಳಕಿಗಾಗಿ ಹುಡುಕಾಡಬೇಕು. ಕಾರಾಗೃಹದಲ್ಲಿ ಭಾವಗೀತೆ ಗಾಯನ ಅಪರೂಪದ ಕಾರ್ಯಕ್ರಮವಾಗಿದ್ದು, ಕವಿತೆಗಳನ್ನು ಕೇಳುವುದರಿಂದ ನಿಮ್ಮ ಮನದಲ್ಲಿ ಪರಿವರ್ತನೆ ಮೂಡಲು ಸಾಧ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ. ಅಭಿಪ್ರಾಯಪಟ್ಟರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಜರ್ನಲಿಸ್ಟ ಯೂನಿಯನ್ ಸಂಯುಕ್ತಾಶ್ರಯದಲ್ಲಿ ನಡೆದ ಬಂಧಿಗಳ ಜೊತೆ ಭಾವಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬುದ್ಧನ ಕ್ರಿಯೆಯ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿದ. ಹಾಗೆ ನೀವು ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು ಎಂಬ ಕನಸು ಇಟ್ಟುಕೊಂಡು ಪರಿವರ್ತನೆಯಾಗಿ. ನಿಮ್ಮ ಮನಸ್ಸಿಗೆ ಸಾಂತ್ವಾನ ಹೇಳಲು ಇಲ್ಲಿನ ಸಾಹಿತ್ಯ ಪರಿಷತ್ತು ಕನ್ನಡ ಕವಿಗಳ ಕವಿತೆಗಳನ್ನು ಗಾಯಕರ ಮೂಲಕ ಕರೆ ತಂದಿದೆ. ಉದಾತ್ತ ಕನಸುಗಳನ್ನು ಇಟ್ಟುಕೊಳ್ಳಿ. ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಕವಿತೆಗೆ ದುಃಖಿಗಳ ಕಣ್ಣೀರು ಒರೆಸುವ ಶಕ್ತಿಯಿದೆ. ನೋವಿಗೆ ಮುಲಾಮು ಹಚ್ಚುವುದು, ಕನಸು ಬಿತ್ತುವುದು, ಬದುಕಿನ ಆಶಾ ಭಾವನೆ ಚಿಗುರುವಂತೆ ಮಾಡುವುದೇ ಕಾವ್ಯದ ಗುಣ. ಕವಿಗಳ ಕವಿತೆಯನ್ನು ಹಾಡಿದಾಗ ಇನ್ನೊಂದು ಹೊಸ ಆಯಾಮ ಕೇಳುಗರಿಗೆ ದಕ್ಕುತ್ತದೆ. ಪಂಜರದ ಹಕ್ಕಿಗಳಾದ ನಿಮಗೆ ಸ್ವಾತಂತ್ರ್ಯದ ಅನುಭವ ಇಲ್ಲಿಂದ ಹೊರ ಬಂದ ಮೇಲೆ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ ಎಂದರು.

ಬಂಧಿಗಳ ಜೊತೆ ಭಾವಗೀತೆ ಭಾವಯಾನ ಕಾರ್ಯಕ್ರಮ ರೂಪಿಸುವುದರ ಹಿಂದೆ ನಿಮ್ಮಲ್ಲಿ ಬೆಳಕಿನ ಬೀಜ ಬಿತ್ತುವುದೇ ಆಗಿದೆ. ನಾವು ಹೊರಗಿದ್ದು ಬಂಧಿಗಳು. ಸಮಾಜ, ಸಂಸ್ಕೃತಿ, ಧರ್ಮ, ಸಂಪ್ರದಾಯಗಳು ನಮ್ಮನ್ನು ನಿಯಂತ್ರಿಸುತ್ತವೆ. ನಾಗರಿಕ ಬದುಕು ಬದುಕುವಂತೆ ಸಮಾನ ಅವಕಾಶಗಳನ್ನು ಸಂವಿಧಾನ ನಮಗೆ ನೀಡುತ್ತದೆ. ಬದುಕು ಇಲ್ಲಿಗೆ ಮುಗಿಯಿತು ಎಂದುಕೊಳ್ಳುವುದು ಬೇಡ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಅಧೀಕ್ಷಕ ಈರಣ್ಣ ಬಿ.ರಂಗಾಪುರ ಮಾತನಾಡಿ ನಮ್ಮ ಪೂರ್ವಜರು ದುಡಿಮೆಯ ನಂತರ ಸಂಜೆ ದೇವಸ್ಥಾನಗಳಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಹಬ್ಬಗಳಲ್ಲಿ ಜಾನಪದ ಕುಣಿತ ಜೊತೆ ಹಾಡು ಸಹ ಇರುತ್ತಿತ್ತು. ಹೆಣ್ಣು ಮಕ್ಕಳು ಬೀಸುವಾಗ, ಕುಟ್ಟುವಾಗ ಹಾಡುಗಳನ್ನು ಕಟ್ಟಿದರು. ಹಾಡು ಕೇಳುವುದರಿಂದ ಮತ್ತು ಹಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಅಂಥ ಉದ್ದೇಶದಿಂದ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕವಿತೆಗಳ ಭಾವಯಾನ ಏರ್ಪಡಿಸಿದ್ದು ಒಳ್ಳೆಯ ಹೆಜ್ಜೆ ಎಂದರು. ವೇದಿಕೆಯಲ್ಲಿ ಕಾರವಾರ ಜಿಲ್ಲಾ ಕರ್ನಾಟಕ ಜರ್ನಲಿಸ್ಟ ಯುನಿಯನ್ ಅಧ್ಯಕ್ಷ ಕಡತೋಕ ಮಂಜು, ಪರಿಷತ್ತನ ಗೌರವ ಕಾರ್ಯದರ್ಶಿ ದೀಪಕಕುಮಾರ್ ಶೆಣ್ವಿ ಇದ್ದರು. ರಾಘವೇಂದ್ರ ಶಾನಭಾಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕವಿತೆಗಳ ಗಾಯನ: ಸುಗಮ ಸಂಗೀತ ಗಾಯಕಿ ದೀಪ್ತಿ ಅರ್ಗೇಕರ್ ಕುವೆಂಪು ಅವರ ಕನ್ನಡವೇ ನಿತ್ಯ, ಕನ್ನಡವೇ ಸತ್ಯ, ಬೇಂದ್ರ ಅವರ ಘಮಘಮಿಸ್ತಾವ ಮಲ್ಲಿಗೆ, ನೀ ಹೊಂಟಿದ್ದೀಗ ಎಲ್ಲಿಗೆ?, ನರಸಿಂಹ ಸ್ವಾಮಿ ಅವರ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು, ಎಂ.ಎನ್.ವ್ಯಾಸರಾವ್ ಅವರ ನೀನಿಲ್ಲದೇ ನನಗೇನಿದೆ, ನಾಗರಾಜ ಇಬ್ಬನಿ ಅವರ ಓ ಮೋಡವೇ, ನಿಲ್ಲು ಮೋಡವೇ, ಬಿ.ಆರ್.ಲಕ್ಷ್ಮಣರಾವ್ ಅವರ ಅಮ್ಮ ನಿನ್ನ ಎದೆಯಾಳದಲ್ಲಿ, ಎಲ್ಲೋ ಜೋಗಪ್ಪ ನಿನ್ನ ಅರಮನೆ, ಶಿಶುನಾಳ ಶರೀಫರ ಕೋಡುಗನ ಕೋಳಿ ನುಂಗಿತ್ತಾ, ಜಿ.ಎಸ್.ಶಿವರುದ್ರಪ್ಪ ಅವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ....ಕವಿತೆಗಳನ್ನು ಹಾಡಿ ರಂಜಿಸಿದರು. ನನ್ನ ಕಾಯದ ಕತ್ತಲ ಕಳೆಯಯ್ಯಾ, ನನ್ನ ಮನದ ಮಾಯವ ಕಳೆಯಯ್ಯಾ ಎಂಬ ವಚನವನ್ನು ಸಹ ಹಾಡಿದರು. ವಿಚಾರಣಾಧೀನ ಕೈದಿ ಆನಂದ ಸಹ ಮುನಿಸು ತರವೇ ಮುಗುದೆ, ಹಿತವಾಗಿ ನಗಲು ಬಾರದೇ ಎಂಬ ಭಾವಗೀತೆಯನ್ನು ಹಾಡಿದರು.

ಉದಯ್ ಸೈಲ್ ಹಾರ‍್ಮೋನಿಯಂ, ರಾಜೇಶ್ ಸೈಲ್ ತಬಲಾ ಸಾಥ್ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು. ಸುಮಾರು 200
ವಿಚಾರಣಾಧೀನ ಕೈದಿಗಳು ಹಾಡುಗಳನ್ನು ಕೇಳಿ ಸಂತೋಷಪಟ್ಟರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ