ಬೆಂಗಳೂರು: ಕುಂದಾಪುರದ ಹೊಟೇಲ್ ಉದ್ಯಮಿ ಕೊಲೆ. ಪತ್ನಿ , ಕುಟುಂಬ ಸ್ನೇಹಿತ ಪೊಲೀಸ್ ವಶಕ್ಕೆ
ಬೆಡ್ ರೂಂನಲ್ಲಿ ಉದ್ಯಮಿಯನ್ನು ರಾತ್ರಿ ಇಡೀ ಕೂಡಿ ಹಾಕಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು, ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ನಡೆಸಲಾಗಿದೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
  ಗಾಂಧಿನಗರದ ಹೋಟೆಲ್ ಉದ್ಯಮಿ, ಕುಂದಾಪುರದ ಸಂತೋಷ್ ಶೆಟ್ಟಿ (56) ಎಂಬವರನ್ನು ಕುಟುಂಬದ ಸ್ನೇಹಿತನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಭಯಾನಕ ಘಟನೆ ಶೇಷಾದ್ರಿಪುರಂನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಅನ್ನಪೂರ್ಣೇಶ್ವರಿ ಶೆಟ್ಟಿ (44) ಮತ್ತು ಕುಟುಂಬ ಸ್ನೇಹಿತ ಪ್ರಕಾಶ್ (24) ಎಂಬಾತನನ್ನು ಬಂಧಿಸಲಾಗಿದೆ.

ಸಂತೋಷ್ ಶೆಟ್ಟಿ ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು, ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ನಡೆಸಲಾಗಿದೆ. ತೀವ್ರ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್  ಅವರನ್ನು ಬಂಧಿತ ಆರೋಪಿ ಪ್ರಕಾಶ್ ಎಂಬಾತನೇ ಯಾರಿಗೂ ಅನುಮಾನ ಬರದಿರಲಿ ಎಂದು ಕಾಲು ಜಾರಿ ಬಿದ್ದಿದ್ದಾರೆ ಎಂದು ಹತ್ತಿರದ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದ ಎನ್ನಲಾಗಿದೆ.

ಕುಂದಾಪುರ ತಾಲೂಕಿನ  ಸಂತೋಷ್ ಶೆಟ್ಟಿ ಮತ್ತು ಅನ್ನಪೂರ್ಣೇಶ್ವರಿ ಶೆಟ್ಟಿ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನ ಗಾಂಧಿನಗರದಲ್ಲಿ 'ಮಹಾಲಕ್ಷ್ಮಿ ಸೆಲ್ಫ್ ಸರ್ವೀಸ್ ಹೋಟೆಲ್ ನಡೆಸುತ್ತಿದ್ದರು.  ಬಂಧಿತ ಆರೋಪಿ ಪ್ರಕಾಶ್  ತಂದೆ ಮತ್ತು ಅನ್ನಪೂರ್ಣೇಶ್ವರಿ ಶೆಟ್ಟಿ ತಂದೆ ಪರಿಚಿತರಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಪ್ರಕಾಶ್  ಅನ್ನಪೂರ್ಣೇಶ್ವರಿ ಜತೆ ಆತ್ಮೀಯವಾಗಿದ್ದ ಎಂದು ತಿಳಿದುಬಂದಿದೆ.

ಸಂತೋಷ್ ಶೆಟ್ಟಿಯನ್ನು ಮುಗಿಸಬೇಕು ಎಂದು ಅವರ ಕೊಲೆಗೆ ಸಂಚು ರೂಪಿಸಿದ್ದ ಇವರಿಬ್ಬರು,  ಸಂತೋಷ್ ತಲೆಗೆ ಮಾರಕಾಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು ಎನ್ನಲಾಗಿದ್ದು, ಪೊಲೀಸರು ಆರೋಪಿಗಳ ತೀವ್ರ ತನಿಖೆ ನಡೆಸುತ್ತಿದ್ದಾರೆ,

ಪ್ರಕರಣ ವಿಚಾರಣಾ ಹಂತದಲ್ಲಿದ್ದು, ಇನ್ನೂ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅನ್ನಪೂರ್ಣೇಶ್ವರಿ ಹೇಳಿದ ಆತ್ಮರಕ್ಷಣೆಯ ಕತೆಯೇ ಭಯಾನಕವಾಗಿದೆ. ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿಯವರ ಕೊಲೆಯನ್ನು ನೆನಪಿಸುವಂತಿದೆ.

ನನ್ನ ಗಂಡ ಸಂತೋಷ ಶೆಟ್ಟಿ ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದರು. ಗುರುವಾರ ರಾತ್ರಿಯ ಕುಡಿದು ಬಂದು ಹಲ್ಲೆ ನಡೆಸಿದಾಗ ನಾನು ಸ್ವ ರಕ್ಷಣೆಗಾಗಿ ಅವರನ್ನು ಬೆಡ್ರೂಂಗೆ ನೂಕಿ ಹೊರಗಿನಿಂದ ಬಾಗಿಲು ಬಂದ್ ಮಾಡಿದ್ದೆ. ರಾತ್ರಿ ಪತಿಯನ್ನು ಅಲ್ಲೇ ಕೂಡಿ ಹಾಕಿದ್ದು , ಬೆಳಗ್ಗೆ ಬಾಗಿಲು ತೆಗೆದಾಗ  ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ನನ್ನ ಮೇಲೆ ಹಲ್ಲೆ ಮಾಡಿದರೆ ತಂದೆಯ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು ಕೂಡಿ ಹಾಕುವಂತೆ ನನ್ನ ಮಗ ಹೇಳಿದ್ದ ನೆನಪಾಯಿತು. ನಾನು ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಮರದ ದೊಣ್ಣೆಯಿಂದ ಅವರ ತಲೆಗೆ ಹೊಡೆದೆ. ನನ್ನ ರಕ್ಷಣೆಗಾಗಿ ಹಲ್ಲೆ ನಡೆಸಿದಾಗ ಅವರು ಸಾವಪ್ಪಿದ್ದಾರೆ ಎಂದು ಅನ್ನಪೂರ್ಣೇಶ್ವರಿ ಶೆಟ್ಟಿ ಹೇಳಿದ್ದಾಳೆ.

ಪೊಲೀಸರು ಅನ್ನಪೂರ್ಣೇಶ್ವರಿಯ ಕತೆಯನ್ನು ಪೂರ್ತಿ ನಂಬದೇ ತನಿಖೆ ಮುಂದುವರಿಸಿದಾಗ ಅವರಿಗೆ ಈ ಕುಟುಂಬದ ನಿಕಟವರ್ತಿ ಕುಂದಾಪುರದವನೇ ಆದ ಪ್ರಕಾಶ್ ಎಂಬಾತ  ಘಟನೆ ನಡೆದಾಗ ಮನೆಯಲ್ಲೇ ಇದ್ದ ಎನ್ನುವ ಸಂಗತಿ ತಿಳಿಯಿತು. ಈ ಬಗ್ಗೆ  ಪೊಲೀಸರು ಆರೋಪಿಗಳ ಬಾಯಿ ಬಿಡಿಸಿದಾಗ, ಗುರುವಾರ ರಾತ್ರಿ ಪತಿ ಸಂತೋಷ್ ಶೆಟ್ಟಿ ಮನೆಗೆ ಬಂದಾಗ ಪ್ರಕಾಶ ಕೂಡ ಮನೆಯಲ್ಲೇ ಇದ್ದ.  ಇವರಿಬ್ಬರೂ ಸೇರಿ ಅವರನ್ನು ರೂಮಿನಲ್ಲಿ ಕೂಡಿ ಹಾಕಿ, ಇಬ್ಬರೂ ಸೇರಿ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಹಲ್ಲೆ ಮಾಡಿದ್ದರು. ಹಲ್ಲೆ ನಂತರ ಆರೋಪಿ ಪ್ರಕಾಶನೇ ಸಂತೋಷ್ ಅವರನ್ನು ಎರಡು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನಾದರೂ ಪರಿಸ್ಥಿತಿ ಗಂಭೀರ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತನಿಖೆ ಸಂದರ್ಭ ಬಯಲಾಗಿದೆ.

ಆರೋಪಿಗಳು ಹೇಳಿಕೆಯನ್ನು ಬದಲಿಸುತ್ತಿರುವುದರಿಂದ ನಿಖರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಕೊಲೆಯಾದ ಸಂತೋಷ್ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಶನಿವಾರ ಬೆಳಗ್ಗೆ ಶವ ಪರೀಕ್ಷೆ ನಡೆಯಲಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ