ಕರಾವಳಿ ಕರ್ನಾಟಕ ವರದಿತುಮಕೂರು: ಡೀಸೆಲ್ ಬೆಲೆ ಸತತ ಏರಿಕೆಯಾಗುತ್ತಿರುವುದರಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿರ್ವಾಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪರಮೇಶ್ವರ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ 16 ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕಾಗಿದೆ. ಇಲ್ಲದಿದ್ದರೆ ಸಂಸ್ಥೆ ನಷ್ಟಕ್ಕೆ ಗುರಿಯಾಗುತ್ತದೆ ಎಂದರು.
ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವರು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲಿಸಲಾಗುತ್ತಿದೆ ಎಂದರು.
ಇದೇ ವೇಳೆ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ನಿನ್ನೆಯಷ್ಟೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಬಸ್ ಪ್ರಯಾಣ ದರ ಏರಿಕೆ ವಿಷಯ ಪ್ರಸ್ತಾಪಿಸಿದ್ದರು. ಅದಕ್ಕೆ ಪೂರಕವೆಂಬಂತೆ ಇಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಕೂಡ ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡಿರುವುದು ಗಮನಿಸಿದರೆ ಸದ್ಯದಲ್ಲೇ ಪ್ರಯಾಣಿಕರಿಗೆ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!