ಕುಂದಾಪುರ ಪುರಸಭೆ: ಸೋಲುಂಡ ಪಕ್ಷಾಂತರಿ ಗುಣರತ್ನ, ಐದನೇ ಬಾರಿ ಗೆದ್ದ ಮೋಹನ್ ಶೆಣೈ
ಗೆದ್ದ ಸಮಾಜಸೇವಕ ಅಬು ಮಹ್ಮದ್, ಗೆಲುವಿನ ನಗು ಬೀರಿದ ಹಳೆ ಹುಲಿ ಕೆ. ಜಿ. ನಿತ್ಯಾನಂದ, ಕೋಡಿಯಿಂದ ಪುರಸಭೆ ಪ್ರವೇಶಿಸಿದ ಪಕ್ಷೇತರ ಅಭ್ಯರ್ಥಿ

ಕರಾವಳಿ ಕರ್ನಾಟಕ ವರದಿ

ಕುಂದಾಪುರ
: ಸೆಂಟ್ರಲ್ ವಾರ್ಡ್ ನಲ್ಲಿ ರಾಜೇಶ್ ಕಾವೇರಿ ಬಂಡಾಯ ಸ್ಪರ್ಧೆಯಿಂದ ಕುತೂಹಲ ಹುಟ್ಟಿಸಿದ್ದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೋಹನದಾಸ ಶೆಣೈ ಸತತ ಐದನೇ ಬಾರಿ ಜಯಗಳಿಸಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಬಿರುಸಿನ ಸ್ಪರ್ಧೆಯಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ರಾಜೇಶ್ ಕಾವೇರಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ 216 ಮತಗಳನ್ನು ಪಡೆದಿದ್ದು, ಮೋಹನದಾಸ ಶೆಣೈಯವರು 236 ಮತ ಪಡೆದು ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವಕುಮಾರ್ ಅವರು 138 ಮತಗಳನ್ನು ಪಡೆದಿದ್ದಾರೆ.

ಚುನಾವಣೆ ಸಂದರ್ಭ ತನಗೆ ರಾಜಕೀಯ ಸ್ಥಾನ-ಮಾನ ನೀಡಿದ್ದ ಸಿಪಿಐ(ಎಂ) ತ್ಯಜಿಸಿ ಬಿಜೆಪಿಯಿಂದ ಕೋಡಿ ಉತ್ತರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಮಾಜಿ ಪುರಸಭಾ ಅಧ್ಯಕ್ಷೆ ಗುಣರತ್ನ(281) ಅವರು ಕಾಂಗ್ರೆಸ್ ಪಕ್ಷದ ಲಕ್ಷ್ಮೀಬಾಯಿ(398) ವಿರುದ್ಧ 117 ಮತಗಳ ಅಂತರದಿಂದ ಸೋತಿದ್ದಾರೆ.

ಬಿಜೆಪಿ ಟಿಕೇಟ್ ಸಿಗದ ಕಾರಣ ಕೋಡಿ ಮಧ್ಯ ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಮಲ ಮಂಜುನಾಥ ಪೂಜಾರಿ 334ಮತ ಪಡೆದು ಜಯಗಳಿಸುವುದರೊಂದಿಗೆ ಕುಂದಾಪುರ ಪುರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಯೋರ್ವರು ಪ್ರಥಮ ಬಾರಿ ಜಯಗಳಿಸುವಂತಾಗಿದೆ, ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪುಷ್ಪಾ ಮೊಗವೀರ 279,ಬಿಜೆಪಿಯ ಸಂಗೀತ ಅಶೋಕ ಪೂಜಾರಿ 232ಮತ ಪಡೆದು ಸೋಲೊಪ್ಪಿದ್ದಾರೆ.

ಈ ಬಾರಿ ಗೆದ್ದವರಲ್ಲಿ ಸಮಾಜ ಸೇವಕ, ಕಾಂಗ್ರೆಸ್ ಅಭ್ಯರ್ಥಿ ಅಬು ಮೊಹ್ಮದ್ ಅವರು ಫೆರ್ರಿ ವಾರ್ಡ್ 415 ನಲ್ಲಿ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಕೆ. ಪುಷ್ಪಾ ಶೇಟ್(235) ವಿರುದ್ಧ ನಿರಾಯಾಸದ ಜಯಗಳಿಸಿದ್ದಾರೆ.

ಮೀನು ಮಾರ್ಕೆಟ್ ವಾರ್ಡ್ ನಲ್ಲಿ ಕಾಂಗ್ರೆಸ್ಸಿನ ಶ್ರೀಧರ ಶೇರೆಗಾರ್(421) ಮತಗಳನ್ನು ಪಡೆದು ಬಿಜೆಪಿಯ ನಾಗರಾಜ್ ಕಾಮಧೇನು412 ಅವರನ್ನು ಬಿರುಸಿನ ಸ್ಪರ್ಧೆಯಲ್ಲಿ ಸೋಲಿಸಿದ್ದಾರೆ.

ಖಾರ್ವಿಕೇರಿ ವಾರ್ಡ್ ನಲ್ಲಿ ಕಾಂಗ್ರೆಸ್ಸಿನ ಚಂದ್ರಶೇಖರ ಖಾರ್ವಿ(443)ಯವರು ಮತಪಡೆದು ಬಿಜೆಪಿಯ ವಸಂತಿ ಮೋಹನ ಸಾರಂಗ(20) ಅವರನ್ನು ಸೋಲಿಸಿದ್ದಾರೆ.

ಹಳೆ ಹುಲಿ ಕಾಂಗ್ರೆಸ್ಸಿಗ ಕೆ.ಜಿ.ನಿತ್ಯಾನಂದ(424) ಅವರು ಚಿಕನ್ ಸಾಲ್ ಬಲಬದಿ ವಾರ್ಡ್ ನಲ್ಲಿ ಬಿಜೆಪಿಯ ದಿವಾಕರ ಪೂಜಾರಿ ಕಡ್ಗಿ(406) ಅವರನ್ನು ಸೋಲಿಸಿ ವಿಜಯದ ನಗು ಚೆಲ್ಲಿದ್ದಾರೆ. ಸರಕಾರಿ ಆಸ್ಪತ್ರೆ ವಾರ್ಡ್ ನಲ್ಲಿ ಮಾಜಿ ಪುರಸಭಾ ಅಧ್ಯಕ್ಷೆ, ಕಾಂಗ್ರೆಸ್ಸಿನ ದೇವಕಿ ಸಣ್ಣಯ್ಯ(294) ಅವರು ಬಿಜೆಪಿಯ ಧನಲಕ್ಷ್ಮಿ ಪ್ರಕಾಶ್ (261) ಅವರನ್ನು ಮಣಿಸಿ ಪುರಸಭೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

ನಾನಾ ಸಾಹೇಬ್ ವಾರ್ಡ್ ನಲ್ಲಿ ಬಿಜೆಪಿಯ ರೋಹಿಣಿ ಉದಯ ಕುಮಾರ್(431)  ಸಿಪಿಐ(ಎಂ) ಎದುರಾಳಿ ಲಲಿತಾ ಎಸ್, (146) ಮತ್ತು ಜ್ಯೋತಿ ಡಿ. ನಾಯ್ಕ-(ಕಾ)(104) ಅವರನ್ನು ಸೋಲಿಸಿದ್ದಾರೆ.

ಈ ಬಾರಿ ಸೋತವರಲ್ಲಿ ಪ್ರಮುಖರು ಕಾಂಗ್ರೆಸ್ ಪಕ್ಷದಿಂದ ಚಿಕ್ಕನಸಾಲು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಜಾಕೋಬ್ ಡಿ’ಸೋಜ. ಜಾಕೋಬ್(311) ಅವರನ್ನು ಬಿಜೆಪಿಯ ಸಂತೋಷ್ ಶೆಟ್ಟಿ(392) ಸೋಲಿಸಿದ್ದಾರೆ. ಟಿಟಿ ವಾರ್ಡ್ ನಲ್ಲಿ ಕಾಂಗ್ರೆಸ್ಸಿನ ರವಿಕಲಾ ಗಣೇಶ್ ಸೇರಿಗಾರ್(315) ಅವರನ್ನು ಬಿಜೆಪಿಯ ವೀಣಾ ಭಾಸ್ಕರ ಮೆಂಡನ್(443) ಅವರು ಸೋಲಿಸಿದ್ದಾರೆ. ಇಲ್ಲಿ ಜೆಡಿಎಸ್ ಸ್ಪರ್ಧಿ ಶೆಲೆಟ್ ಡಿ’ಸೋಜ(97) ಮತ ಪಡೆದರು.
ಸೋತ ಸಿಪಿಐ(ಎಂ) ಅಭ್ಯರ್ಥಿಗಳಲ್ಲಿ ಪ್ರಮುಖರಾದ ಎಚ್. ನರಸಿಂಹ ಅವರು ಕುಂದೇಶ್ವರ ವಾರ್ಡ್ ನಲ್ಲಿ 179 ಮತಗಳನ್ನು ಪಡೆದರು. ಅವರ ಎದುರಾಳಿ ಬಿಜೆಪಿಯ ಗಿರೀಶ್ ದೇವಾಡಿಗ ಅವರು 436 ಮತಗಳೊಂದಿಗೆ ಜಯ ಗಳಿಸಿದರು. ಕಾಂಗ್ರೆಸ್ ಪಕ್ಷದ ಅರುಣ್ ಶೇಟ್ 28 ಮತಗಳನ್ನು ಪಡೆದರು.
1996ರಲ್ಲಿ ಕುಂದಾಪುರ ಪುರಸಭೆಯ ಒಂಬತ್ತು ಸ್ಥಾನಗಳಲ್ಲಿ ಜಯಗಳಿಸಿ ಜನತಾದಳದೊಂದಿಗೆ ಅಧಿಕಾರ ಗದ್ದುಗೆ ಏರಿ ಜನಪ್ರಿಯ ಆಡಳಿತ ನೀಡಿದ್ದ ಸಿಪಿಐ(ಎಂ) ಪಕ್ಷವು ಈ ಬಾರಿ ಸ್ಪರ್ದಿಸಿದ ಏಳೂ ಕ್ಷೇತ್ರಗಳಲ್ಲಿ ಸೋತಿದೆ. ಮೀಸಲಾತಿಯಿಂದ ಕಳೆದ ಬಾರಿ ಸಿಪಿಐ(ಎಂ) ಪಕ್ಷದ ಕಲಾವತಿಯವರು ಎರಡೂವರೆ ವರ್ಷ ಕಾಲ ಪುರಸಭೆ ಅಧ್ಯಕ್ಷರಾಗಿದ್ದಾಗಲೀ, ಈ ಬಾರಿ ಮಾಜಿ ಪುರಸಭಾ ಅಧ್ಯಕ್ಷ ವಿ. ನರಸಿಂಹ ಅವರು ತನ್ನ ವಯಸ್ಸನ್ನೂ ಕಡೆಗಣಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮನೆಮನೆಗೆ ತಿರುಗಿ ಬಿರುಸಿನ ಪ್ರಚಾರ ಮಾಡಿದ್ದಾಗಲೀ ಮತದಾರರ ಮನಗೆಲ್ಲಲು ಸಾಧ್ಯವಾಗಿಲ್ಲ.

ಈ ಬಾರಿ ಪುರಸಭೆಯ ಇಪ್ಪತ್ಮೂರು ಸ್ಥಾನಗಳ ಪೈಕಿ ಹದಿನಾಲ್ಕು ಸ್ಥಾನಗಳಿಸಿದ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಎಂಟು, ಒಬ್ಬರು ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಇದನ್ನೂ ಓದಿ:
►►ಉಡುಪಿ, ಕುಂದಾಪುರ, ಕಾರ್ಕಳ: ಬಿಜೆಪಿಗೆ ಅಧಿಕಾರ:
http://bit.ly/2wDv4gb
►►ಸಾಲಿಗ್ರಾಮ ಪ.ಪಂ: 1 ಮತ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ರೋಚಕ ಜಯ: http://bit.ly/2oyK6PJ
►►ಎಸ್ಡಿಪಿಐಯೊಂದಿಗೆ ಮೈತ್ರಿ ಇಲ್ಲವೆಂದ ಸಚಿವ ಖಾದರ್: http://bit.ly/2Nd8nZH
►►ಖಾದರ್ ಆಪ್ತ ಸೋಲು, ಅಂಗಡಿಗಳಿಗೆ ಕಲ್ಲೆಸೆತ: http://bit.ly/2oy6qZX

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ