ಹೇರ್ ಸ್ಟ್ರೈಟ್ನಿಂಗ್ ನಿಂದ ಉದುರಿದ ಕೂದಲು: ಸಂತ್ರಸ್ತೆ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಗೋಣಿಕೊಪ್ಪಲು
: ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಸಮೀಪದ ಬಾಳೆಲೆ ನಿಟ್ಟೂರು ನಿವಾಸಿ ಯುವತಿಯೋರ್ವರ ಶವ ಶನಿವಾರ ಸಂಜೆ ಪತ್ತೆಯಾಗಿದ್ದು, ಅಸಮರ್ಪಕ ಹೇರ್ ಸ್ಟ್ರೈಟ್ನಿಂಗ್ ನಿಂದ ಕೂದಲು ಉದುರಿದ್ದರಿಂದ ಗಾಬರಿಗೊಂಡು ಆತ್ಮಹತ್ಯೆಗೈದಿದ್ದಾರೆ ಎನ್ನಲಾದ ಕಳವಳಕಾರಿ ಸಂಗತಿ ವರದಿಯಾಗಿದೆ.

ಆತ್ಮಹತ್ಯೆಗೈದ ವಿದ್ಯಾರ್ಥಿನಿಯನ್ನು ಹತ್ತೊಂಬತ್ತರ ಹರಯದ ನೇಹಾ ಗಂಗಮ್ಮ ಎಂದು ಗುರುತಿಸಲಾಗಿದೆ. ಈಕೆ ಗಾಂಡಂಗಡ ಪೆಮ್ಮಯ್ಯ ಎಂಬವರ ಪುತ್ರಿ, ಮೈಸೂರು ಸೈಂಟ್ ಜೋಸೆಫ್ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ನೇಹಾ ಅವರು ಕೂರ್ಗ್ ಪಿಜಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಆ.28ರಂದು ಕಾಲೇಜಿಗೆ ಹೋಗುವುದಾಗಿ ತೆರಳಿದ ನೇಹಾ ಅವರ ಮೃತದೇಹವು  ಶನಿವಾರ ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆಯಾಗಿತ್ತು.

ಐದು ದಿನಗಳ ಬಳಿಕ ಮೃತದೇಹ ಸಾಕಷ್ಟು ಕೊಳೆತಿತ್ತು. ಕೈಯಲ್ಲಿದ್ದ ಉಂಗುರದ ಆಧಾರದಲ್ಲಿ ಪೋಷಕರು ಗುರುತು ಪತ್ತೆಹಚ್ಚಿದರು.

ಮಗಳ ಆತ್ಮಹತ್ಯೆಗೆ ಬ್ಯೂಟಿ ಪಾರ್ಲರ್ ನವರು ಅಸಮರ್ಪಕವಾಗಿ ಹೇರ್ ಸ್ಟ್ರೈಟ್ನಿಂಗ್ ಮಾಡಿ ಆಕೆಯ ತಕೆ ಕೂದಲು ಉದುರಿದ್ದೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ನೇಹಾ ತಂದೆ ಪೆಮ್ಮಯ್ಯ ಅವರು ಬ್ಯೂಟಿ ಪಾರ್ಲರ್ ವಿರುದ್ದ ಪೊನ್ನಂಪೇಟೆ ಪೊಲೀಸರಿಗೆ ದೂರಿದ್ದು, ಪ್ರಕರಣ ದಾಖಲಿಸಲಾಗಿದೆ.
ಜು.23ರಂದು ಮೈಸೂರಿನ ವಿ.ವಿ.ಮೊಹಲ್ಲಾದ ರೋಹಿಣಿ ಬ್ಯೂಟಿ ಪಾರ್ಲರ್ ನಲ್ಲಿ ನೇಹಾ ಅವರು ತಮ್ಮ ಗುಂಗುರು ತಲೆಗೂದಲನ್ನು ಆಕರ್ಷಕವಾಗಿ ಮಾಡುವ ಆಸೆಯಿಂದ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದರು. ಆ ಬಳಿಕ ಅವರ ತಲೆಕೂದಲು ವಿಪರೀತ ಉದುರುತ್ತಿದ್ದುದರಿಂದ ಚಿಂತಾಕ್ರಾಂತರಾದ ನೇಹಾ ತಂದೆ-ತಾಯಿ ಬಳಿ ತಮ್ಮ ನೋವು ಹೇಳಿಕೊಂಡಿದ್ದರು. ಈ ಬಗ್ಗೆ ಬ್ಯೂಟಿ ಪಾರ್ಲರ್ ಸಿಬಂದಿಯನ್ನು ಎರಡು ಬಾರಿ ಭೇಟಿ ಮಾಡಿ ಸಂಬಂಧಪಟ್ಟವರೊಡನೆ ಚರ್ಚಿಸಲಾಗಿತ್ತು. ಇದೇ ಚಿಂತೆಯಿಂದ ನೇಹಾ ತಾನು ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸುವುದಾಗಿ ಹೇಳುತ್ತಿದ್ದರು ಎಂದು ಮಗಳನ್ನು ಕಳೆದುಕೊಂಡ ತಂದೆ ಹೇಳಿದ್ದಾರೆ.

ನೇಹಾ ನದಿಯ ಪ್ರವಾಹಕ್ಕೆ ಬಿದ್ದು ಸಾವಪ್ಪಿರಬಹುದೆಂದು ಶಂಕಿಸಲಾಗಿತ್ತು. ಆಕೆಯ ಪೋಷಕರು ತಮ್ಮ ಮಗಳು ಬ್ಯೂಟಿ ಪಾರ್ಲರ್ ಸಿಬಂದಿ ಕಳಪೆ ಸಾಮಗ್ರಿಗಳಿಂದ ಹೇರ್ ಸ್ಟ್ರೈಟ್ನಿಂಗ್ ಮಾಡಿದ್ದರಿಂದಲೇ ಅವರು ತೀರಾ ನೊಂದು ಆತ್ಮಹತ್ಯೆಗೈದಿದ್ದಾರೆ ಎಂದು ದೂರು ದಾಖಲಿಸುವುದರೊಂದಿಗೆ ಪ್ರಕರಣ ಮಹತ್ವದ್ದಾಗಿದೆ.

ಹೇರ್ ಸ್ಟ್ರೈಟ್ನಿಂಗ್ ಮಾಡುವ ಖಯಾಲಿ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗೆ ವ್ಯಾಪಕವಾಗಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಿ ಈ ಆಧುನಿಕ ಕೇಶ ವಿನ್ಯಾಸ ಮಾಡಿದಲ್ಲಿ ಕೂದಲು ಉದುರುತ್ತದೆ ಎನ್ನಲಾಗಿದೆ. ಈ ಬಗ್ಗೆ ಅರಿವಿಲ್ಲದೇ ಹೇರ್ ಸ್ಟ್ರೈಟ್ನಿಂಗ್ ಮಾಡಿದರೆ ಎಂಥ ಪರಿಸ್ಥಿತಿ ಉಂಟಾಗಬಹುದು ಎಂಬ ಬಗ್ಗೆ ಈ ಪ್ರಕರಣ ಎಚ್ಚರಿಕೆ ಕರೆಗಂಟೆ ಎನ್ನಬಹುದಾಗಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ