ಗಾಂಧಿ ಅಧ್ಯಯನ ಪರೀಕ್ಷೆ: ಪಾತಕಿ ಅರುಣ್ ಗಾವ್ಳಿ ಟಾಪರ್!

ಕರಾವಳಿ ಕರ್ನಾಟಕ ವರದಿ

ನಾಗಪುರ
: ಸಹಯೋಗ ಟ್ರಸ್ಟ್, ಸರ್ವೋದಯ ಆಶ್ರಮ ಮತ್ತು ಮುಂಬೈ ಸರ್ವೋದಯ ಮಂಡಲ್ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ‘ಗಾಂಧಿ ಚಿಂತನೆ’ ಕುರಿತ ಪರೀಕ್ಷೆಯಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ಪಾತಕಿ ಅರುಣ್ ಗಾವ್ಳಿ ‘ಟಾಪರ್’ ಆಗಿರುವ ಕುತೂಹಲಕಾರಿ ಸಂಗತಿ ವರದಿಯಾಗಿದೆ. ಅರುಣ್ ಗಾವ್ಳಿ 80 ಅಂಕಗಳಲ್ಲಿ 74 ಅಂಕ ಪಡೆದಿದ್ದಾನೆ. ಈತನಿಗೆ ಪ್ರಮಾಣ ಪತ್ರ ಮತ್ತು ಖಾದಿ ಬಟ್ಟೆಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಪರೀಕ್ಷೆಗೆ ಹಾಜರಾತಿ ಕಡ್ಡಾಯವಾಗಿರದೇ ಆಯ್ಕೆಯನ್ನು ಕೈದಿಗಳಿಗೆ ಬಿಡಲಾಗಿತ್ತು. ಪರೀಕ್ಷೆ ಮುನ್ನ ಗಾಂಧಿ ಕುರಿತ ಅಧ್ಯಯನಕ್ಕೆ ಪೂರಕ ಪುಸ್ತಕಗಳನ್ನು ಕೈದಿಗಳಿಗೆ ಒದಗಿಸಲಾಗಿತ್ತು. ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಎಂಬತ್ತು ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಪರೀಕ್ಷೆಗೆ 160ಕೈದಿಗಳು ಹಾಜರಾಗಿದ್ದರು.

ಫಲಿತಾಂಶವನ್ನು ಕಳೆದ ವಾರ ಪ್ರಕಟಿಸಲಾಗಿದೆ ಎಂದು ಸಹಯೋಗ ಟ್ರಸ್ಟಿ ರವೀಂದ್ರ ಭೂಸರಿ ತಿಳಿಸಿದ್ದಾರೆ.
ಮುಂಬೈ ಪಾಲಿಕೆ ಸದಸ್ಯ ಕಮಲಾಕರ್ ಜಮ್ ಸಂದೇಕರ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಗಾವ್ಳಿ ಮತ್ತು ಆತನ ಹನ್ನೊಂದು ಮಂದಿ ಸಹಚರಚರು ಜೈಲು ಶಿಕ್ಷೆ ಅನುಭವಿಸಿತ್ತಿದ್ದಾರೆ.

ಮುಂಬೈಯಲ್ಲಿ ‘ಡ್ಯಾಡಿ’ ಎಂದೇ ಕುಖ್ಯಾತನಾಗಿದ್ದ ಅರುಣ್ ಗಾವ್ಳಿ ಅಖಿಲ ಭಾರತೀಯ ಸೇನಾ ಎಂಬ ರಾಜಕಿಯ ಪಕ್ಷವನ್ನೂ ಕಟ್ಟಿದ್ದ. ಈತನ ಕತೆ ಹೊಂದಿದ ‘ಡ್ಯಾಡಿ’ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಅರ್ಜುನ್ ರಾಮ್ ಪಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅರುಣ್ ಗಾವ್ಳಿ ಮೇಲೆ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಿವೆ. ಎಪ್ಪತ್ತರ ದಶಕದಲ್ಲಿ ಸೆಂಟ್ರಲ್ ಮುಂಬೈಯಲ್ಲಿ ರಾಮ್ ನಾಯಕ್ ಮತ್ತು ಬಾಬು ರೇಶಿಂ ಎಂಬವರ ಕುಖ್ಯಾತ ‘ಬೈಕುಲ್ಲಾ ಕಂಪೆನಿ’ ಕ್ರಿಮಿನಲ್ ಗ್ಯಾಂಗ್ ಸದಸ್ಯರಾಗಿ ಪಾತಕ ಲೋಕಕ್ಕೆ ಅರುಣ್ ಗಾವ್ಳಿ ಯಾನೆ ಅರುಣ್ ಗುಲಾಬ್ ಅಹಿರ್ ಮತ್ತು ಆತನ ಸಹೋದರ ಕಿಶೋರ್ ಯಾನೆ ಪಪ್ಪ ಪ್ರವೇಶಿಸುತ್ತಾರೆ. ರಾಮ ನಾಯಕ್ ಪೊಲೀಸ್ ಎನ್ಕೌಂಟರ್ ನಲ್ಲಿ ಹತನಾದ ಬಳಿಕ ಅರುಣ್ ಗಾವ್ಳಿ ಎಂಬತ್ತರ ದಶಕದಲ್ಲಿ ಗ್ಯಾಂಗ್ ಮುನ್ನಡೆಸುತ್ತಾನೆ. ರಾಮ್ ನಾಯಕ್ ಕೊಲೆಯಲ್ಲಿ ಪಾತಕಿ ದಾವೂದ್ ಇಬ್ರಾಹಿಮ್ ಸಂಚು ಇದೆ ಎಂದು ಬಾವಿಸಿದ್ದ ಅರುಣ್ ಗಾವ್ಳಿ ಗ್ಯಾಂಗ್ ಮತ್ತು ದಾವೂದ್ ಇಬ್ರಾಹಿಂ ಡಿ-ಕಂಪೆನಿ ಗ್ಯಾಂಗ್ ನಡುವೆ ಆಗ ಭಾರೀ ಕದನಗಳು ನಡೆಯುತ್ತಿದ್ದವು. ಗಾವ್ಳಿ ಗ್ಯಾಂಗ್ ತುಂಬ ಪ್ರಬಲವಾಗಿದ್ದ ಕಾರಣ ದಾವೂದ್ ಗ್ಯಾಂಗಿನ ಚೋಟಾ ರಾಜನ್, ಚೋಟಾ ಶಕೀಲ್, ಶರದ್ ಶೆಟ್ಟಿ ಮುಂತಾದವರು ದುಬೈಗೆ ಪಲಾಯನ ಮಾಡಿ ಅಲ್ಲಿಂದಲೇ ಮುಂಬೈಯಲ್ಲಿ ಭೂಗತ ಜಗತ್ತನ್ನು ನಿಯಂತ್ರಿಸುವಂತಾಗಿತ್ತು.

ಅರುಣ್ ಗಾವ್ಳಿಯನ್ನು ಹಲವು ಬಾರಿ ಪೊಲೀಸರು ಬಂಧಿಸಿದ್ದರೂ ಆತನ ವಿರುದ್ಧ ಸಾಕ್ಷ್ಯ ಹೇಳಲು ಯಾರೂ ಧೈರ್ಯ ತೋರದ ಕಾರಣ ಪ್ರಕರಣಗಳು ಬಿದ್ದುಹೋಗುತ್ತಿದ್ದವು. ಎಂಬತ್ತರ ದಶಕದಲ್ಲಿ ಅಂದಿನ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಪೊಲೀಸರು ಅರುಣ್ ಗಾವ್ಳಿಯಂಥವರ ವಿರುದ್ಧ ಕ್ರಮಕೈಗೊಳ್ಳುವುದರ ವಿರುದ್ಧ ದನಿ ಎತ್ತುವುದರೊಂದಿಗೆ ಗಾವ್ಳಿಗೆ ರಾಜಕೀಯ ಬೆಂಬಲವೂ ಸಿಕ್ಕಿತು. ಅರುಣ್ ಗಾವ್ಳಿಯಂಥ ಹುಡುಗರು ‘ನಮ್ಮ ಹುಡುಗರು’ ಎಂದು ಠಾಕ್ರೆ ಸಮರ್ಥಿಸುತ್ತಿದ್ದರು. ಆದಾಗ್ಯೂ ತೊಂಬತ್ತರ ದಶಕದ ಮಧ್ಯದಲ್ಲಿ ಶಿವಸೇನಾ ಪಾಲಿಕಾ ಸದಸ್ಯನನ್ನು ಕೊಲೆಗೈದ ಗಾವ್ಳಿ ತನ್ನದೇ ರಾಜಕೀಯ ಪಕ್ಷ ಅಖಿಲ ಭಾರತೀಯ ಸೇನಾ ಸ್ಥಾಪಿಸಿದ್ದ. ತನ್ನದೇ ಪಕ್ಷದಿಂದ ಸ್ಪರ್ಧಿಸಿ ಶಾಸಕನೂ ಆಗಿದ್ದ ಗಾವ್ಳಿಗೆ ಆಗಸ್ಟ್ 2012ರಲ್ಲಿ ಶಿವಸೇನಾ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಸ್ಮರಿಸಬಹುದಾಗಿದೆ

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ