ಗೋಕರ್ಣ ದೇವಾಲಯ ಮರಳಿ ಸರ್ಕಾರದ ವಶಕ್ಕೆ: ರಾಮಚಂದ್ರಾಪುರ ಮಠಕ್ಕೆ ಭಾರಿ ಹಿನ್ನಡೆ. ಬಿಜೆಪಿಗೆ ಮುಖಭಂಗ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಪುರಾಣ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ  ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ನೀಡಿದ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅನುವಂಶಿಯ ಅರ್ಚಕರು ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಸದಸ್ಯರು ಶುಕ್ರವಾರ ಸಂಭ್ರಮಾಚರಣೆ ನಡೆಸಿದರು.

10 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶುಕ್ರವಾರ ಹೊರಬಿದ್ದ ಮಹತ್ವದ ತೀರ್ಪನ್ನು ಸ್ವಾಗತಿಸಿದ ಅವರು ಮಹಾಬಲೇಶ್ವರ ದೇವಸ್ಥಾನದ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಜಯಘೋಷ ಕೂಗಿ ರಥ ಬೀದಿಯಲ್ಲಿ ಪರಸ್ಪರ ಸಿಹಿ ಹಂಚಿ ತೀರ್ಪನ್ನು ಸ್ವಾಗತಿಸಿದರು.

ಈ ವೇಳೆ  ಪಿಐಎಲ್ ಅರ್ಜಿದಾರರಲ್ಲಿ ಒಬ್ಬರಾದ ಅರ್ಚಕ ಗಣೇಶ ಮಾತನಾಡಿ ಹತ್ತು ವರ್ಷಗಳ ಬಳಿಕ ನ್ಯಾಯಾಲಯದಲ್ಲಿದ್ದ ಹಲವು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಮಹಾಬಲೇಶ್ವರ ಉತ್ತಮ ತೀರ್ಪು ನೀಡಿದ್ದಾನೆ. ಇದರಿಂದ ದೇವಾಲಯದಲ್ಲಿ ನಡೆಯುತ್ತಿದ್ದ ಅನ್ಯಾಯಗಳಿಗೆ ಮುಕ್ತಿ ಸಿಕ್ಕಿದೆ. ಎಲ್ಲ ಜನರು ಮುಕ್ತವಾಗಿ ದೇವಸ್ಥಾನದಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಏನಿದು ಪ್ರಕರಣ?
2008 ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯ ಸರಕಾರ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತಕ್ಕೆ ನೀಡಿತ್ತು. ಆದರೆ ಇದರ ವಿರುದ್ಧ ಬಾಲಚಂದ್ರ ದೀಕ್ಷಿತ್,  ನರಹರಿ ಹೆಗಡೆ ಸೇರಿದಂತೆ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಪಿಐಎಲ್ ಅನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗಿಯ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ಬಗ್ಗೆ ತೀರ್ಪು ಹೊರ ಬಿದ್ದಿದ್ದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಆದೇಶ ಅಮಾನ್ಯಗೊಂಡಿದೆ.

ತೀರ್ಪಿನಲ್ಲಿ  ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಯೇ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಎನ್ ಕೃಷ್ಣಪ್ಪ ಅವರನ್ನು ಸಲಹೆಗಾರನ್ನಾಗಿ ನೇಮಕ ಮಾಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ