ಪೊಲೀಸರಿಂದ ಪಾಠ: ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಮಗ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ವಯೋವೃದ್ಧ ತಂದೆಗೆ ಹಣಕ್ಕಾಗಿ ಪೀಡಿಸಿ, ಹೊಡೆದು ಎಳೆದಾಡುತ್ತಿದ್ದ ಮಗ ತಂದೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸುವಂತೆ ಆತನ ಮನ ಬದಲಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರತ್ಕಲ್ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ತೀರ್ಥ ಪ್ರಸಾದ ಕೊಡುವ ಸೇವೆ ಮಾಡುತ್ತಿದ್ದ ಯೋಗೀಶ ಭಟ್ಟ (88) ಅವರ ಮಗ ಸುರೇಶ ಭಟ್ಟ (38) ಎಂಬವರು ಕಳೆದ ಎಂಟು ವರ್ಷದಿಂದ ದುಡ್ಡಿಗಾಗಿ ತಂದೆಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಸುರೇಶ್ ಭಟ್ಟ ಮಠಕ್ಕೆ ಬಂದು ತಂದೆಗೆ ಹೊಡೆಯುವ, ಪೆಟ್ಟಿಗೆ ಎಳೆದುಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೃದ್ಧ ತಂದೆಗೆ ಹಿಂಸೆ ನೀಡುವ ಮಗನಿಗೆ ಶಿಕ್ಷೆಯಾಗಲೇಬೇಕು  ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು.

ಈ ಪ್ರಕರಣ ಸುರತ್ಕಲ್ ಪೊಲೀಸರ ಗಮನಕ್ಕೂ ತರಲಾಗಿತ್ತು. ಉಡುಪಿಯಲ್ಲಿದ್ದ ಯೋಗೀಶ ಭಟ್ಟರ ಮಗನನ್ನು ಬುಧವಾರ ಠಾಣೆಗೆ ಕರೆಸಿದ ಪೊಲೀಸರು, ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಆತನಿಗೆ ಹೇಳಿದರು.

ಇನ್ನು ಮುಂದೆ ಹಲ್ಲೆ, ಹಿಂಸೆ ನೀಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದನ್ನು ಒಪ್ಪಿದ ಸುರೇಶ ಭಟ್ಟ ತಂದೆಯನ್ನು ಚೆನ್ನಾಗಿ ಗೌರವದಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ