ಸುಳ್ಯ: ರಸ್ತೆ ಹೊಂಡ ಮುಚ್ಚಿ ಜನಪ್ರಿಯರಾದ ಠಾಣಾಧಿಕಾರಿ!

ಕರಾವಳಿ ಕರ್ನಾಟಕ ವರದಿ

ಸುಳ್ಯ:
ಪೊಲೀಸ್ ಅಧಿಕಾರಿಗಳು ಇರುವುದೇ ಸಮಾಜಸೇವಾ ಸಂಸ್ಥೆಗಳು ಕೆಲಸ ಮಾಡುವಾಗ ಕೈಕಟ್ಟಿ ನಿಂತಿ ಫೋಟೋಗೆ ಪೋಸ್ ಕೊಡಲು ಎಂಬಂಥ ಈ ದಿನಗಳಲ್ಲಿ ಸುಳ್ಯ ಠಾಣಾ ಎಸ್.ಐ. ಮಂಜುನಾಥ ಅವರು ತಾವೇ ಹಾರೆ ಎತ್ತಿ ರಸ್ತೆ ಹೊಂಡ ಮುಚ್ಚಿ ನಾಗರಿಕರ ಮೆಚ್ಚುಗೆಗೆ ಪಾತ್ರರಾದ ಅಪರೂಪದ ಘಟನೆ ವರದಿಯಾಗಿದೆ.

ಮಾಣಿ-ಮೈಸೂರು ರಸ್ತೆಯ ಪೆರಾಜೆ ಬಳಿ ಅವರು ಹೊಂಡ ಮುಚ್ಚುವ ಕೆಲಸಕ್ಕೆ ಬೇಕಾದ ಹಾರೆ, ಪಿಕ್ಕಾಸು ಇತ್ಯಾದಿ ಪರಿಕರ ಕೊಂಡು ಹೋಗಿ  ಸ್ವತಃ ಹಾರೆ ಹಿಡಿದ ಎಸ್ಸೈ ಹೊಂಡ ಮುಚ್ಚಿದ್ದಾರೆ. ಮಾಣಿ-ಮೈಸೂರು ಹೆದ್ದಾರಿಯ ಪೆರಾಜೆಯಲ್ಲಿ ರಸ್ತೆ ಮಧ್ಯ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿ ಪರಿಣಮಿಸಿದ ಬಗ್ಗೆ ಪ್ರಯಾಣಿಕರು ದೂರಿದ್ದರು.

ಪೊಲೀಸ್ ಜೀಪ್ ಚಾಲಕರ ಜೊತೆ ರಸ್ತೆ ಬದಿಯಲ್ಲಿ ಸ್ವತಃ  ಎಸ್.ಐ. ಅವರು ಹೊಂಡ ಮುಚ್ಚುತ್ತಿರುವ ದೃಶ್ಯ ಕಂಡು ಸಾರ್ವಜನಿಕರಿಗೆ ಆಶ್ಚರ್ಯವಾಯಿತು. ಅನೇಕ ಮಂದಿ ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯ ಸೆರೆ ಹಿಡಿದರು. ಇನ್ನು ಕೆಲವರು ಮೊಬೈಲ್ ಕಿಸೆಯಲ್ಲಿಟ್ಟು ಎಸ್ಸೈ ಅವರ ಕೆಲಸದಿಂದ ಸ್ಪೂರ್ತಿ ಪಡೆದು ತಾವೂ ಹೊಂಡ ಮುಚ್ಚಲು ನೆರವಾಗುವ ಮೂಲಕ ನಾಗರಿಕ ಜವಾಬ್ದಾರಿಯನ್ನು ನಿರ್ವಹಿಸಿದರು.

ಎಸ್ಸೈಯೋರ್ವರು ತಾವೇ ಮುಂದಾಗಿ ರಸ್ತೆ ಹೊಂಡ ಮುಚ್ಚಿದ ವರದಿಗಳು ವಿರಳ ಎಂಬ ಹಿನ್ನೆಲೆಯಲ್ಲಿ ಎಸ್ಸೈ ಡಾ. ಮಂಜುನಾಥ್ ಅವರ ಸಮಾಜಸೇವೆಯ ಈ ಕಾರ್ಯದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ