ವಿಮಾನದಲ್ಲಿ ಮಗು ಅತ್ತಿದ್ದಕ್ಕೆ ಭಾರತೀಯ ಕುಟುಂಬವನ್ನು ಕೆಳಗಿಳಿಸಿದ ಬ್ರಿಟಿಷ್ ಏರ್‌ವೇಸ್!

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಸೀಟ್ ಬೆಲ್ಟ್ ಕಟ್ಟಿಕೊಳ್ಳುವ ಸಂದರ್ಭ ವಿಮಾನ ಸಿಬಂದಿ ಗದರಿಸಿದಾಗ ಹೆದರಿದ ಮಗು ಜೋರಾಗಿ ಅಳುತ್ತಿತ್ತು ಎಂಬ ಕಾರಣಕ್ಕೆ ತಮ್ಮನ್ನು ಬ್ರಿಟಿಷ್ ಏರ್ವೇಸ್ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಭಾರತೀಯ ಕುಟುಂಬವೊಂದು ಆರೋಪಿಸಿರುವ ಕಳವಳಕಾರಿ ವಿದ್ಯಮಾನ ವರದಿಯಾಗಿದೆ.

ಜುಲೈ23ರಂದು ಮೂರು ವರ್ಷದ ಮಗು ಅಳುತ್ತಿತ್ತು ಎಂಬ ಕಾರಣಕ್ಕೆ ವಿಮಾನ ಟೇಕಾಫ್ ಸಂದರ್ಭ ವಿಮಾನವನ್ನು ಟರ್ಮಿನಲ್ ಗೆ ತಂದು ಭಾರತೀಯ ಕುಟುಂಬ ಮತ್ತು ಅವರ ಹಿಂದಿನ ಆಸನದಲ್ಲಿದ್ದ ಭಾರತೀಯರನ್ನು ಬ್ರಿಟಿಷ್ ಏರ್ವೇಸ್ ವಿಮಾನದಿಂದ ಇಳಿಸಲಾಗಿದೆ ಎಂಬ ಗುರುತರ ಆರೋಪ ಮಾಡಲಾಗಿದೆ.

1984ರ ಭಾರತೀಯ ಎಂಜಿನಿಯರಿಂಗ್ ಸೇವಾ ಅಧಿಕಾರಿ ಹಾಗೂ ಸಾರಿಗೆ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಶ್ರೇಣಿಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಕುಟುಂಬದ ವಿರುದ್ಧ ಬ್ರಿಟಿಷ್ ಏರ್ವೇಸ್ ಸಂಸ್ಥೆಯ ಲಂಡನ್-ಬರ್ಲಿನ್ ವಿಮಾನದಲ್ಲಿ ವರ್ಣಬೇಧ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕೇಂದ್ರ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಸಂತ್ರಸ್ತ ಕುಟುಂಬ ದೂರು ಸಲ್ಲಿಸಿದೆ.

ಸೀಟ್ ಬೆಲ್ಟ್ ಕಟ್ಟುವ ಸಂದರ್ಭ ಭದ್ರತಾ ಘೋಷಣೆ ಬಳಿಕ ಪ್ರತ್ಯೇಕ ಆಸನದಲ್ಲಿದ್ದ ಮಗು ಅಳತೊಡಗಿತ್ತು. ಈ ಸಂದರ್ಭ ವಿಮಾನ(BA 8495) ದ ಸಿಬಂದಿ ಮಗುವಿಗೆ ತನ್ನ ಆಸನದಲ್ಲಿ ಸೀಟ್ ಬೆಲ್ಟ್ ಕಟ್ಟಿ ಕುಳಿತುಕೊಳ್ಳುವಂತೆ ಜೋರಾಗಿ ಗದರಿಸಿದ್ದು, ಮೊದಲೇ ಸೀಟ್ ಬೆಲ್ಟ್ ಅನುಭವಕ್ಕೆ ಸ್ಪಂದಿಸುತ್ತಿದ್ದ ಮಗುವಿಗೆ ಕಿರಿಕಿರಿಯಾಗಿ ಮಗು ಅಳುತ್ತಲೇ ಇತ್ತು. ಈ ಸಂದರ್ಭ ಹಿಂದಿನ ಆಸನದಲ್ಲಿ ಕೂತಿದ್ದ ಭಾರತೀಯ ಕುಟುಂಬ ಮಗುವಿಗೆ ಬಿಸ್ಕತ್ ನೀಡಿ ಸಮಾಧಾನ ಮಾಡಿದ್ದರು.

ಈ ನಡುವೆ ವಿಮಾನಯಾನ ಸಂಸ್ಥೆ ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದು, ಸಂತ್ರಸ್ತ ಗ್ರಾಹಕರ ಜೊತೆ ಸಂಪರ್ಕದಲ್ಲಿದೆ. ಯಾವುದೇ ರೀತಿಯ ತಾರತಮ್ಯವನ್ನು ತಾವು ಸಹಿಸುವುದಿಲ್ಲ. ಪ್ರಕರಣದ ತನಿಖೆ ನಡೆಸಿ ಲೋಪಗಳಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

‘you bloody keep quiet otherwise you will be thrown out of the window’ ಎಂದು ಮಗುವಿಗೆ ಬ್ರಿಟಿಷ್ ಏರ್ವೇಸ್ ಸಿಬಂದಿ ಗದರಿಸಿ ಪದೇ ಪದೇ ಭಾರತೀಯರಿಗೆ ‘ಬ್ಲಡಿ ಇಂಡಿಯನ್ಸ್’ ಪದ ಬಳಸಿ ಅವಮಾನಿಸಿದ ಬಗ್ಗೆಯೂ ಸಂತ್ರಸ್ತ ಕುಟುಂಬ ಕೇಂದ್ರ ಸಚಿವ ಸುರೇಶ್ ಪ್ರಭು ಅವರಿಗೆ ಬರೆದ ಪತ್ರದಲ್ಲಿ ವಿವರವಾಗಿ ದಾಖಲಿಸಿದೆ. ಈ ಸಿಬಂದಿ ಬಗ್ಗೆ ಕಠಿಣ ಕ್ರಮ ಜರಗಿಸುವಂತೆ ಅವರು ಒತ್ತಾಯಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ