ಕುಂದಾಪುರ: ಯುವಕನಿಗೆ ಕಂಬಕ್ಕೆ ಕಟ್ಟಿ ಹಲ್ಲೆ!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನಗರದ ಎಲ್.ಐ.ಸಿ ರಸ್ತೆಯಲ್ಲಿ ಯುವಕನೋರ್ವನನ್ನು ಮಹಿಳೆಯರ ಗುಂಪೊಂದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಕಾನೂನು ಕೈಗೆತ್ತಿಕೊಂಡ ಘಟನೆ ವರದಿಯಾಗಿದೆ.

ಯುವಕ ಕೆಲ ಸಮಯದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ಜನನಿಬಿಡ ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಮಹಿಳೆಯರು ಸಂಚರಿಸುತ್ತಿದ್ದರೂ ಆತ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.

ಯುವಕನ ವರ್ತನೆಯನ್ನು ಗಮನಿಸುತ್ತಿದ್ದ ಸ್ಥಳೀಯರು ಮಹಿಳೆಯರ ನೇತೃತ್ವದಲ್ಲಿ ಈತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ಬಂದ ಬಳಿಕ ಅವರು ಸ್ಥಳಕ್ಕೆ ಧಾವಿಸಿ ಯುವಕನನ್ನು ಗುಂಪು ಹಲ್ಲೆಯಿಂದ ರಕ್ಷಿಸಿದ್ದಾರೆ.

ಯುವಕ ನಗರದ ಪ್ರಸಿದ್ಧ ಹೊಟೇಲ್ ಉದ್ಯಮಿಯೋರ್ವರ ಮಗನಾಗಿದ್ದು, ವಿವಾಹಿತನಾಗಿರುವ ಈತನಿಗೆ ಮಕ್ಕಳಿದ್ದಾರೆ ಎಂದು ಮನೆಮಂದಿ ತಿಳಿಸಿದ್ದಾರೆ. ಕೆಲ ಸಮಯದಿಂದ ಈತನ ಮನಸ್ಸು ಸ್ಥಿಮಿತದಲ್ಲಿರದ ಕಾರಣ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ತೊಡಗುತ್ತಿದ್ದ ಎನ್ನಲಾಗಿದೆ.

ಈತನ ವರ್ತನೆ ಸಾರ್ವಜನಿಕರಿಗೆ ಮುಜುಗರ ತರುವಂಥದ್ದಾಗಿದ್ದರೂ ತಾವೇ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸುವ ಬದಲು ಆತನ ಮನೆಮಂದಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಬಹುದಿತ್ತು. ಒಬ್ಬ ವ್ಯಕ್ತಿಯನ್ನು ಹಲವರು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸುವಂಥ ವರ್ತನೆ ಕುಂದಾಪುರದ ಪ್ರಜ್ಞಾವಂತ ನಾಗರಿಕರಿಗೆ ತಕ್ಕುದಲ್ಲ ಎಂದು ವಿಚಾರವಂತರು ಗುಂಪು ಹಲ್ಲೆಯ ಬಗ್ಗೆ ತೀವೃ ಬೇಸರ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ