ಕುಂದಾಪುರ ಪ್ರಮೋದ್ ಖಾರ್ವಿ ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನಾಲ್ಕು ವರ್ಷಗಳ ಹಿಂದೆ ಕುಂದಾಪುರವನ್ನು ತಲ್ಲಣಗೊಳಿಸಿದ್ದ ಪ್ರಮೋದ್ ಖಾರ್ವಿ(22) ಕೊಲೆ ಪ್ರಕರಣದಲ್ಲಿ ನಾಲ್ಕು ಮಂದಿ ಅಪರಾಧಿಗಳಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ಕುಂದಾಪುರ ನಿವಾಸಿ ಜೀವನ್ ರಾವ್(32), ಖಾರ್ವಿಕೇರಿಯ ಹರ್ಬಟ್ ಕುಮಾರ್ ಬರೆಟ್ಟೊ(32), ರೋಶನ್ ವಿಲ್ಫ್ರೆಡ್ ಬರೆಟ್ಟೊ(24) ಮತ್ತು ಜೋಸೆಫ್ ಗಂಗೊಳ್ಳಿ(46) ಅವರು ಈ ಪ್ರಕರಣದಲ್ಲಿ ಅಪರಾಧಿಗಳು ಎಂದು ಆ.1ರಂದು ತೀರ್ಪಿತ್ತಿದ್ದ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

ಜೀವಾವಧಿ ಶಿಕ್ಷೆಯೊಂದಿಗೆ ತಲಾ ನಲವತ್ತು ಸಾವಿರ ರೂ. ದಂಡ ಮತ್ತು ಮೃತದೇಹವನ್ನು ನದಿಗೆಸೆದು ಸಾಕ್ಷ್ಯನಾಶ ಮಾಡಿರುವುದಕ್ಕೆ ಮೂರು ವರ್ಷ ಜೈಲು ಮತ್ತು ತಲಾ ಹತ್ತು ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದು, ಮೃತ ಪ್ರಮೋದ ಖಾರ್ವಿ ಕುಟುಂಬದವರು ಪರಿಹಾರ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪಡೆಯಬಹುದೆಂದು ನ್ಯಾಯಾಲಯ ತಿಳಿಸಿದೆ.

ಖಾರ್ವಿಕೇರಿಯ ರಿಂಗ್ ರೋಡ್ ಬಳಿ ಗಂಗೊಳ್ಳಿಯ ಸೆಲಿನಾ ಎಂಬವರ ಸಾಫ್ಟ್ ಡ್ರಿಂಕ್ಸ್ ಫ್ಯಾಕ್ಟರಿಯಲ್ಲಿ ಸೋಡಾ ಬಾಟಲ್ ವಿಷಯದಲ್ಲಿ  ಮೇಲ್ ಖಾರ್ವಿಕೇರಿಯ ಗಣಪತಿ ಖಾರ್ವಿಯವರ ಮಗ ಪ್ರಮೋದ್ ಅವರನ್ನು ಕೊಲೆಗೈಯಲಾಗಿದೆ ಎಂದು ದೂರಲಾಗಿತ್ತು. ಜು.13, 2014 ರ ರಾತ್ರಿ11;30 ಹೊತ್ತಿಗೆ ಮರದ ದೊಣ್ಣೆಯಿಂದ ಥಳಿಸಿ ಪ್ರಮೋದ್ ಅವರನ್ನು ಕೊಲೆಗೈಯಲಾಗಿತ್ತು. ಮೃತದೇಹ ಜು.14 ರಂದು ಪಂಚಗಂಗಾವಳಿ ನದಿಯಲ್ಲಿ ಪತ್ತೆಯಾಗಿತ್ತು.

ಪ್ರಾಸಿಕ್ಯೂಷನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದು,  ಹದಿನೈದು ಸಾಂದರ್ಭಿಕ ಸಾಕ್ಷಿಗಳ ವಿಚಾರಣೆ ನಡೆದಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ತೀರ್ಪು ನೀಡಿದ್ದಾರೆ.

ಆಗ ಕುಂದಾಪುರ ವೃತ್ತ ನಿರೀಕ್ಷಕರಾಗಿದ್ದ ದಿವಾಕರ್ ಅವರು ಎರಡು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಸಂದರ್ಭ ದೇಹದ ಆರು ಕಡೆ ಗಾಯಗಳು ಪತ್ತೆಯಾಗಿದ್ದು, ಕೊಲೆ ಸಂದೇಹ ವ್ಯಕ್ತವಾಗಿತ್ತು. ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಕುಂದಾಪುರಕ್ಕೆ ತರುವಾಗ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಮೃತದೇಹ ಇರಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಕುಂದಾಪುರ ಪರಿಸರದಲ್ಲಿ ಕುಮಾರ್ ಖಾರ್ವಿ ಎಂದೇ ಗುರುತಿಸಲಾಗಿದ್ದ ಪ್ರಮೋದ್ ಅವರ ಹತ್ಯೆಯಲ್ಲಿ ಮರಳು ಮಾಫಿಯಾದ ಕೈವಾಡವಿದೆ ಎಂಬ ಅನುಮಾನಗಳೂ ವ್ಯಕ್ತವಾಗಿದ್ದವು.

ಖಾರ್ವಿಕೇರಿಯ ಗಣಪತಿ ಖಾರ್ವಿ ಮತ್ತು ಜಯಲಕ್ಷ್ಮೀ ಖಾರ್ವಿಯವರ ಏಕೈಕ ಪುತ್ರ ಪ್ರಮೋದ್ ಮನೆಯ ಆಧಾರಸ್ತಂಭವಾಗಿದ್ದರು. ಪ್ರಮೋದ್ ಅವರಿಗೆ ಮೂವರು ಅಕ್ಕಂದಿರು ಇದ್ದಾರೆ. ಪ್ರಮೋದ್ ಸಾವು ಅವರ ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ