ಪೊಲೀಸ್ ಅಧಿಕಾರಿ ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಸ್ಕೆಚ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಖ್ಯಾತ ಪತ್ರಕರ್ತೆ ಮತ್ತು ಪ್ರಖರ ವಿಚಾರವಾದಿ ಗೌರಿ ಲಂಕೇಶ್ ಅವರ ಕೊಲೆ ಪ್ರಕರಣದ ಆರೋಪಿಗಳು ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲೇ ಬಾಡಿಗೆಗೆ ಇದ್ದು, ಅಲ್ಲೇ ಗೌರಿ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ಸಂಗತಿ ವಿಶೇಷ ತನಿಖಾ ತಂಡದ ತನಿಖೆ ಸಂದರ್ಭ ಬೆಳಕಿಗೆ ಬಂದಿದೆ.

ಮಾಗಡಿ ರಸ್ತೆಯ ಸೀಗೆಹಳ್ಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಪೆಕ್ಟರ್ ಅವರಿಗೆ ಸೇರಿದ ಮನೆಯನ್ನು ತುಮಕೂರು ಮೂಲದ ಬಂಧಿತ ಆರೋಪಿ, ಗುತ್ತಿಗೆದಾರ ವೃತ್ತಿಯ ಸುರೇಶ್ ಕುಮಾರ್(36) ತನ್ನ ಪತ್ನಿ, ಮಕ್ಕಳ ಜೊತೆ ವಾಸವಿರುವ ನೆಪದಲ್ಲಿ ಬಾಡಿಗೆಗೆ ಪಡೆದಿದ್ದ. ಕೆಲ ಸಮಯದ ಬಳಿಕ ಪತ್ನಿ, ಮಕ್ಕಳನ್ನು ಊರಿಗೆ ಕಳಿಸಿದ ಈತ ಪುಣೆಯ ಅಮೋಲ್ ಕಾಳೆ, ಸುಜಿತ್ ಕುಮಾರ್ ಸೇರಿದಂತೆ ಇತರ ಆರೋಪಿಗಳಿಗೆ ಉಳಿದುಕೊಳ್ಳಲು ಈ ಮನೆ ನೀಡಿ ಅವರಿಗೆ ಊಟೋಪಚಾರ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಿದ್ದ.
ಪರಶುರಾಮ್ ವಾಘ್ಮೋರೆ, ಗಣೇಶ್ ಮಿಸ್ಕಿನ್ ಬೈಕಿನಲ್ಲಿ ತೆರಳಿ ಗೌರಿ ಲಂಕೇಶ್ ಹತ್ಯೆಗೈದ ಬಳಿಕ ಇದೇ ಮನೆಗೆ ಬಂದು ತಮ್ಮ ವಸ್ತುಗಳನ್ನು ಎತ್ತಿಕೊಂಡು ಕಾಲ್ಕಿತ್ತಿದ್ದರು.

ಮಂಗಳೂರು ಮೂಲದ ರಾಜೇಶ್ ಬಂಗೇರ ಮತ್ತು ಸುಳ್ಯದ ಮೋಹನ್ ನಾಯಕ್ ಮುಂತಾದವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿದಿದ್ದು, ಸುರೇಶ್ ಪಾತ್ರ ಕೂಡ ಇರುವುದು ತಿಳಿದುಬಂದಿದೆ.

ಈ ಮನೆಯನ್ನು ಆರೋಪಿಗಳು ಬಾಡಿಗೆಗೆ ಪಡೆದ ಸಂಗತಿ ಎಸಿಬಿ ಅಧಿಕಾರಿಗೆ ತಿಳಿದಿರಲಿಲ್ಲ. ಈ ಮನೆ ನೋಡಿಕೊಳ್ಳುವ ಉಸ್ತುವಾರಿಯನ್ನು ಅವರು ತನ್ನ ಸಂಬಂಧಿಕರಿಗೆ ನೀಡಿದ್ದು, ಸಂಬಂಧಿ ಬಾಡಿಗೆಗೆ ಕೊಟ್ಟಿದ್ದರು.

ಆರೋಪಿ ಸುರೇಶ್ ಕುಮಾರ ಶಸ್ತ್ರ ಮತ್ತು ಮಹತ್ವದ ಸಾಕ್ಷ್ಯ ಬಚ್ಚಿಟ್ಟಿರುವ ಸಾಧ್ಯತೆ ಇರುವುದರಿಂದ ಸುರೇಶನನ್ನು ವಿಚಾರಣೆಗಾಗಿ ವಶಕ್ಕೆ ನೀಡುವಂತೆ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರಕ್ಕೆ ನ್ಯಾಯಾಲಯ ಮುಂದೂಡಿದೆ. ಆರೋಪಿಗಳಿಗೆ ವಾಸ್ತವ್ಯಕ್ಕೆ ಮನೆ ಮತ್ತು ಇತರ ಸೌಲಭ್ಯಗಳನ್ನು ಸುರೇಶ್ ನೀಡಿರುವ ಕಾರಣ ಆತನ ಹೆಚ್ಚಿನ ವಿಚಾರಣೆಯ ಅಗತ್ಯವಿರುವುದರಿಂದ ವಶಕ್ಕೆ ನೀಡಬೇಕಿದೆ ಎಂದು ವಿಶೇಷ ಸರಕಾರಿ ಅಭಿಯೋಜಕರು ವಾದಿಸಿದ್ದು, ಸುರೇಶ್ ವಕೀಲರು ವಾದ ಮಂಡನೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದಾರೆ.

ಶುಕ್ರವಾರ ಮೂರನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆದು ಶನಿವಾರಕ್ಕೆ ಮುಂದೂಡಲ್ಪಟ್ಟಿತ್ತು.
ಸುರೇಶ್ ಕುಮಾರನನ್ನು ಕುಣಿಗಲ್ ನಲ್ಲಿ ಬಂಧಿಸಲಾಗಿದ್ದು, ಈತನನ್ನು ತನಿಖೆಗಾಗಿ ಎಸ್.ಐ.ಟಿ ತಂಡ ಮಂಗಳೂರು, ಕುಣಿಗಲ್ ಮುಂತಾದ ಸ್ಥಳಗಳಿಗೆ ಕೊಂಡೊಯ್ದಿತ್ತು. ಈತ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿರುವ ಸಾಧ್ಯತೆ ಶಂಕಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ